ವಿಜಯಸಾಕ್ಷಿ ಸುದ್ದಿ, ಡಂಬಳ: ಇಡೀ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಡವರ ಹೊಟ್ಟೆ ತುಂಬಿಸುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯ ಬಡವರ ಶಕ್ತಿಯನ್ನು ಇಮ್ಮಡಿಗೊಳಿಸಿ, ಆರ್ಥಿಕವಾಗಿ ಸಬಲರನ್ನಾಗಿಸಿದೆ ಎಂದು ಹಿರೇವಡ್ಡಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ವೆಂಕಪ್ಪ ಬಳ್ಳಾರಿ ಹೇಳಿದರು.
ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ 80 ಲಕ್ಷ ರೂ ವೆಚ್ಚದಲ್ಲಿ ಶರಣಪ್ಪ ನಂದಿಕೋಲ ಅವರ ಜಮೀನಿನಿಂದ ಕಳ್ಳಿಮನೆ ಅವರ ಮನೆಯವರೆಗೆ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ರೈತರ ಹಿತಕ್ಕಾಗಿ ಪೇಠಾ ಆಲೂರ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬಿಸುವುದರ ಮೂಲಕ ಮತ್ತು ಕೆರೆ-ಕಾಲುವೆಗಳನ್ನು ಉತ್ತಮವಾಗಿಸಲು ಕೋಟಿಗಟ್ಟಲೆ ಹಣವನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಶಾಸಕ ಜಿ.ಎಸ್. ಪಾಟೀಲ ಅವರ ಕಾರ್ಯಕ್ರಮಗಳು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತಿರುವುದು ಪ್ರಶಂಸನೀಯ ಎಂದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ.ಪಾಟೀಲ ಮಾತನಾಡಿ, ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣ ಮತ್ತು ಯುವ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆಗಳೆಂಬ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಸಂಪೂರ್ಣ ಸದುಪಯೋಗಪಡೆದುಕೊಳ್ಳಲು ಮುಂದಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಹನಮರಡ್ಡಿ ಮೇಟಿ, ಲೋಕಪ್ಪ ನಂದಿಕೋಲ, ಸದಸ್ಯರಾದ ಬಸಪ್ಪ ದ್ಯಾವಣ್ಣವರ, ಸಿದ್ದಪ್ಪ ಕರೆಕಲ್ಲ, ಜಂದಿಸಾಬ ಮುಂಡರಗಿ, ಕಾಶಪ್ಪ, ಅಬ್ದುಲ್ ಕಲಕೇರಿ, ಕಾಶಪ್ಪ ಶಿರುಂದ, ಹನಮಪ್ಪ ಶಿರುಂದ, ಸುರೇಶ ಮುಪ್ಪಿನೆಣ್ಣಿ, ಶರಣಪ್ಪ ಕುಂದರಳ್ಳಿ, ಉಮೇಶ ಕಿರಿಕಿರಿ, ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು.