ಧಾರವಾಡ:- ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಡಾ. ಪಂಚಾಕ್ಷರಿ ಹಿರೇಮಠ ಅವರು ತಮ್ಮ 92 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ.
ಧಾರವಾಡದ ಜಯನಗರದಲ್ಲಿರುವ ಅವರ ನಿವಾಸದಲ್ಲಿ ಶುಕ್ರವಾರ ವಿಧಿವಶರಾಗಿದ್ದಾರೆ. ಇಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1 ರವರೆಗೆ ಅವರ ಪಾರ್ಥಿವ ಶರೀರವನ್ನು ಜಯನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ನಂತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಕೊಪ್ಪಳ ತಾಲೂಕಿನ ಬಿಸರಳ್ಳಿಯಲ್ಲಿ ಜರುಗಲಿದೆ. ಇವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇನ್ನೂ 1933 ರ ಜನವರಿ 6 ರಂದು ಕೊಪ್ಪಳ ಜಿಲ್ಲೆಯ ಬಿಸರಳ್ಳಿಯಲ್ಲಿ ಜನಿಸಿದ್ದ ಹಿರೇಮಠರು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಹಿರೇಮಠರು ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. 19 ಕವನ ಸಂಕಲನಗಳು, 11 ಕಥಾ ಸಂಕಲನಗಳು, 8 ಅನುವಾದಿತ ಕಾದಂಬರಿಗಳು, 13 ಪ್ರಬಂಧ ಸಂಕಲನಗಳು ಸೇರಿದಂತೆ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.