ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಿಂದ ಉಚ್ಛಾಟನೆಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜದ ನಾಯಕರು ಮತ್ತು ಸ್ವಾಮೀಜಿಗಳು ಬಲವಾಗುತ್ತಿರುವ ಕಾರಣದಿಂದ ಅವರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪಂಚಮಸಾಲಿ ನಾಯಕರು ಮತ್ತು ಸ್ವಾಮೀಜಿಗಳು ಗಟ್ಟಿಯಾಗುತ್ತಿದ್ದಾರೆ. ಇದೇ ಕಾರಣಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಇರಬಹುದು, ಹಿಂದೆ ಸಿದ್ದಲಿಂಗ ಸ್ವಾಮೀಜಿ ಇರಬಹುದು, ಇದೀಗ ನಮ್ಮನ್ನೂ ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದರು.
ಟ್ರಸ್ಟಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೆಲವರಿಗೆ ನಾವು ಹಿಂದೂಗಳು ಎಂದು ಹೇಳುವುದೇ ಇಷ್ಟವಿಲ್ಲ, ಇನ್ನೂ ಕೆಲವರಿಗೆ ಲಿಂಗಾಯತ ಹಿಂದೂ ಎಂದು ಕರೆಯುವುದೂ ಇಷ್ಟವಿಲ್ಲ. ಇಂದಿನ ಸಭೆ ಬಗ್ಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಪಂಚಮಸಾಲಿ ಮಠವು ಕೆಲವರದ್ದೇ ಅಲ್ಲ ಎಂದು ಹೇಳಿದರು.
ಇನ್ನೂ, ಸರ್ಕಾರದ ಅನುದಾನ ಮತ್ತು ಭಕ್ತರ ದೇಣಿಗೆ ಹಣದ ಲೆಕ್ಕ ಕೇಳಿದ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡಿ ಹೊರಹಾಕಲಾಗಿದೆ. ಆದರೆ ಈ ನಿರ್ಧಾರದಿಂದ ನನಗೆ ಯಾವುದೇ ಆತಂಕ ಇಲ್ಲ. ಪಂಚಮಸಾಲಿ ಸಮಾಜವೇ ನನ್ನ ಶ್ವಾಸ, ಸಮಾಜದ ಜನ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಮಠದ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪೀಠಕ್ಕೆ ಬಂದ ಬಳಿಕ ಭಕ್ತರ ಮನೆಗಳಿಗೆ ಭೇಟಿ ನೀಡಬೇಕು ಎಂಬ ಆಸೆ ಇತ್ತು. ಆದರೆ ಹರಿಹರ ಮತ್ತು ದಾವಣಗೆರೆಗೆ ಹೋಗದಂತೆ ವ್ಯವಸ್ಥಿತವಾಗಿ ತಡೆಯಲಾಗಿತ್ತು. ಮಠದಲ್ಲಿ ಬಸವಣ್ಣನವರ ಫೋಟೋ ಹಾಕಲು ಸಹ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.



