ವಿಜಯಸಾಕ್ಷಿ ಸುದ್ದಿ, ರೋಣ: ನಾಗರಿಕ ಸಮಾಜದಲ್ಲಿ ಭಯವನ್ನು ಹೋಗಲಾಡಿಸಿ ನೆಮ್ಮದಿಯ ಬದುಕು ಕಳೆಯಲು ಕೇಂದ್ರ ಮೀಸಲು ಪಡೆ ಆರ್‌ಎಎಫ್ ಹಾಗೂ ಪೊಲೀಸ್ ಪಡೆಯಿಂದ ಪಟ್ಟಣದಲ್ಲಿ ಪರೇಡ್ ನಡೆಯಿತು.
ಶುಕ್ರವಾರ ಮಧ್ಯಾಹ್ನ ಪಟ್ಟಣದ ಸೂಡಿ ವೃತ್ತದಿಂದ ಆರಂಭಗೊಂಡ ಪರೇಡ್ ಮುಲ್ಲಾನಭಾವಿ ವೃತ್ತ, ಪೋತರಾಜನ ಕಟ್ಟೆ, ಜಕ್ಕಲಿ ಕ್ರಾಸ್, ಬಸ್ ನಿಲ್ದಾಣದ ಮೂಲಕ ಪೊಲೀಸ್ ಠಾಣೆ ತಲುಪಿತು.
ಈ ಸಂದರ್ಭದಲ್ಲಿ ಆರ್‌ಎಎಫ್‌ನ ಅಸಿಸ್ಟಂಟ್ ಕಮಾಂಡರ್ ಅನಿಲಕುಮಾರ ಜಾಧವ ಮಾತನಾಡಿ, ಜನರು ಭಯಮುಕ್ತ ವಾತಾವರಣದಲ್ಲಿ ಜೀವನ ನಡೆಸಬೇಕು ಎಂಬ ಮಹತ್ವದ ಉದ್ದೇಶದಿಂದ ಆರ್‌ಎಎಫ್ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಗಳಿಂದ ಪರೇಡ್ ನಡೆಸಲಾಗುತ್ತಿದೆ. ಅಲ್ಲದೆ ರೋಣ ಪಟ್ಟಣದ ವಾತಾವರಣದ ಜೊತೆಗೆ ಇಲ್ಲಿನ ವ್ಯವಸ್ಥೆಯನ್ನು ಅರಿಯುವುದು ಹಾಗೂ ಸಕಾಲಕ್ಕೆ ಆಗಮಿಸಿ ರಕ್ಷಣೆ ನೀಡುವ ಹೊಣೆಗಾರಿಕೆಯನ್ನು ನಾವೆಲ್ಲರೂ ಹೊಂದಿದ್ದೇವೆ ಎಂದರು.
ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾತನಾಡಿ, ಸಾರ್ವಜನಿಕರ ರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಇಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹತೋಟಿಗೆ ತರಲು ಸಹ ಆರ್‌ಎಎಫ್ ತಂಡ ನಮ್ಮೊಂದಿಗೆ ಸಹಕರಿಸಲಿದೆ. ಮುಖ್ಯವಾಗಿ, ನಾಗರಿಕ ಸಮಾಜ ಸಹ ಪೊಲೀಸರ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿ ಸಮಾಜಘಾತುಕ ಶಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು. ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅತಿ ಅವಶ್ಯಕ ಎಂದರು.
ಆರ್‌ಎಎಫ್ ಪಿಎಸ್‌ಐ ಜೆ.ಜಿ. ಸುರೇಶ, ಪಿಎಸ್‌ಐ ಪ್ರಕಾಶ ಬಣಕಾರ, ವಿ.ಎಸ್. ಚವಡಿ ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು.



