ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ನಿಧಿ ಆಸೆಯಿಂದ ಮಗು ಬಲಿ ಕೊಡಲು ಯತ್ನಿಸಿದ ಘಟನೆ ನಡೆದಿದೆ. ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ 8 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದಾರೆ.
ಸೈಯದ್ ಇಮ್ರಾನ್ ಹಾಗೂ ಅವರ ಪತ್ನಿ, ನಿಧಿಗಾಗಿ ಪೂಜೆ ನಡೆಸುವ ಉದ್ದೇಶದಿಂದ ಮಗುವನ್ನು ಬಲಿ ಕೊಡಲು ಸಿದ್ಧರಾಗಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಿನ್ನೆ ಹುಣ್ಣಿಮೆ ಹಿನ್ನೆಲೆ ಈ ಪೂಜೆ ನಡೆಸಲಾಗುತ್ತಿತ್ತು ಎನ್ನಲಾಗಿದ್ದು, ಮನೆಯ ಕೋಣೆಯೊಂದರಲ್ಲಿ ಗುಂಡಿ ತೆಗೆದು ಪೂಜೆ ನಡೆಯುತ್ತಿದ್ದುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ತನಿಖೆಯ ವೇಳೆ, ಸೈಯದ್ ಇಮ್ರಾನ್ ದಂಪತಿ 8 ತಿಂಗಳ ಹಿಂದೆ ಕೂಲಿ ಕಾರ್ಮಿಕರಿಂದ ಮಗುವನ್ನು ದತ್ತು ಪಡೆದಿದ್ದರು ಎಂಬ ಮಾಹಿತಿ ಲಭಿಸಿದೆ. ದತ್ತು ಪಡೆದ ಬಳಿಕ ತಮ್ಮ ಹೆಸರಿನಲ್ಲಿ ನಕಲಿ ಜನನ ಪ್ರಮಾಣ ಪತ್ರ ಮಾಡಿಸಿಕೊಂಡಿರುವುದೂ ಬೆಳಕಿಗೆ ಬಂದಿದೆ. ದಾಳಿ ವೇಳೆ, ದಂಪತಿ ದತ್ತು ಸಂಬಂಧಿತ ಒಪ್ಪಂದ ಪತ್ರವೊಂದನ್ನು ಅಧಿಕಾರಿಗಳಿಗೆ ನೀಡಿದ್ದರು,
ಕಾನೂನುಬದ್ದವಾಗಿ ದತ್ತು ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂಬ ಕಾರಣಕ್ಕೆ ಮಗುವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಗು ಪ್ರಸ್ತುತ ಶಿಶು ಕೇಂದ್ರದಲ್ಲಿ ಸುರಕ್ಷಿತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿ ಹಾಗೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



