ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಲೈಂಗಿಕ ಶಿಕ್ಷಣದ ಅಗತ್ಯವಿದೆ. ವಿಶೇಷವಾಗಿ 13ರಿಂದ 19 ವರ್ಷದವರೆಗೆ ಹೆಣ್ಣು ಮತ್ತು ಗಂಡು ಎಂಬ ವ್ಯತ್ಯಾಸವಿಲ್ಲದೆ ಅವರಲ್ಲಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಆಗುತ್ತವೆ. ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ತಿಳುವಳಿಕೆ, ಮಾಹಿತಿ, ಆಪ್ತತೆಯ ಅಗತ್ಯವಿರುತ್ತದೆ. ಪಾಲಕರು ಹೆಚ್ಚು ಸಮಯವನ್ನು ಮಕ್ಕಳೊಂದಿಗೆ ಕಳೆದು ಅವರ ಭಾವನೆಗಳಿಗೆ, ಕುತೂಹಲಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ, ವಾರ್ತಾ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಸಂಕಷ್ಟಕ್ಕಿಡಾದ ಅತ್ಯಾಚಾರ, ಪೋಕ್ಸೋ, ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿ ಸಂತ್ರಸ್ಥೆಯರು ಮತ್ತು ಅವರ ಪಾಲಕರೊಂದಿಗೆ ಸಂವಾದ ಮತ್ತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ಬಾಲ್ಯ ವಿವಾಹವನ್ನು ಮಾಡುವ ಮುಂಚೆ ಒಂದು ಸಾರಿ ಮಕ್ಕಳ ಮನಸ್ಥಿತಿ, ಮಾನಸಿಕ ಸ್ಥಿತಿ, ದೈಹಿಕವಾಗಿ ಅವರ ಮೇಲೆ ಆಗುವ ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ಮದುವೆ ಮಾಡಿದರೆ ನಮ್ಮ ಭಾರ ಕಡಿಮೆ ಆಗುತ್ತದೆ ಎಂಬ ಮನಸ್ಥಿತಿಯಿಂದ ಪೋಷಕರು ಹೊರ ಬರಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವಾಯ್. ಪಾಟೀಲ ಮಾತನಾಡಿ, ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳಿಗೆ ಮತ್ತು ಸಂತ್ರಸ್ಥೆಯರಿಗೆ ನಿಯಮಾನುಸಾರ ತಕ್ಷಣ ಸ್ಪಂದಿಸಿ, ಆಶ್ರಯ ನೆರವು ನೀಡಲಾಗುತ್ತದೆ. ಬಾಲ ಗರ್ಭಿಣಿಯವರಿಗೆ ಪ್ರತ್ಯೇಕವಾದ ವಸತಿ ನಿಲಯದ ಅಗತ್ಯವಿದೆ. ಮಿಷನ್ ವಾತ್ಸಲ್ಯ ಯೋಜನೆಯಡಿ ಸಮರ್ಪಕವಾಗಿ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಹೆಚ್.ಹೆಚ್. ಕುಕನೂರ ಸ್ವಾಗತಿಸಿದರು. ಸುನಿತಾ ನಾಡಿಗೇರ ನಿರೂಪಿಸಿದರು. ಕಾರ್ಯಕ್ರಮ ಅಧಿಕಾರಿ ಡಾ. ಕಮಲಾ ಬೈಲೂರ ವಂದಿಸಿದರು. ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಮ್. ಹೊನಕೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಂಗಾಧರ ಎಮ್.ದೊಡ್ಡಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ, ಸಮಾಜ ಕಲ್ಯಾಣ ಇಲಾಖೆಯ ಗೆಜೆಟೆಡ್ ಅಧಿಕಾರಿ ಲಲಿತಾ ಹಾವೇರಿ, ರೂಡ್‌ಸೆಟ್ ನಿರ್ದೇಶಕ ಪೃಥ್ವಿರಾಜ್ ಜೆ.ಪಿ, ನವನಗರ ಆಯುಕ್ತರ ಕಚೇರಿ ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ ವಿಜಯಕುಮಾರ ವಿ.ಟಿ., ಜಿ.ಪಂ ಸಹಾಯಕ ಕಾರ್ಯದರ್ಶಿ ಅಜೇಯ ಎನ್ ಉಪಸ್ಥಿತರಿದ್ದರು.
ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ, ಸಮಾಜದಲ್ಲಿ ನಾವು ಅಂದುಕೊಂಡಿರುವ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡಬೇಕು. ಅದರ ಬಗ್ಗೆ ಅರಿವು ಮೂಡಿಸಬೇಕು. ಯೌವ್ವನದ ವಯಸ್ಸಿನಲ್ಲಿ ಮನಸ್ಸನ್ನು ಚಂಚಲತೆಗೆ ಬಿಡದೆ ಸ್ಥಿರತೆಯಲ್ಲಿಟ್ಟುಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಆಗಿರುವ ದೌರ್ಜನ್ಯವು ಬೇರೆ ಮಕ್ಕಳಿಗೂ ಆಗಬಾರದು ಎಂದು ನೀವು ಅರಿತು, ಇಲಾಖೆಗಳೊಂದಿಗೆ ಕೈಜೋಡಿಸಿದರೆ ಮುಂದೆ ಈ ರೀತಿ ಆಗದೆ ಇರುವ ಹಾಗೆ ನೋಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.