ಬೆಂಗಳೂರು: ನಗರದಲ್ಲಿ ಆತಂಕ ಮೂಡಿಸಿದ ಘಟನೆ ಹೆನ್ನೂರಿನಲ್ಲಿ ನಡೆದಿದೆ. ನಿದ್ರಿಸುತ್ತಿದ್ದ 4 ವರ್ಷದ ಮಗುವನ್ನು ಪೋಷಕರು ಕ್ಯಾಬ್ನಲ್ಲಿಯೇ ಮರೆತು ಮನೆಗೆ ತೆರಳಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ ರಾಜ್ಯದ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯಾದ ‘ನಮ್ಮ 112’ ಸಮಯೋಚಿತ ಕ್ರಮದಿಂದ ಮಗು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಗೊಂಡಿದೆ.
ಜಿಯಾನ್ ಚುಂಗಿ (4) ರಕ್ಷಿಸಲಾದ ಬಾಲಕ. ಕುಟುಂಬಸ್ಥರು ಒಟ್ಟಾಗಿ ಇಸ್ಕಾನ್ ದೇವಸ್ಥಾನಕ್ಕೆ ತೆರಳಿದ್ದರು. ಮರಳಿ ಬರುವಾಗ ಕ್ಯಾಬಿನ ಹಿಂಬದಿ ಆಸನದಲ್ಲಿ ಜಿಯಾನ್ ನಿದ್ರೆಗೆ ಜಾರಿದ್ದಾನೆ. ಅಪಾರ್ಟ್‌ಮೆಂಟ್ ತಲುಪಿದ ಬಳಿಕ ಕುಟುಂಬಸ್ಥರು ತುರ್ತಾಗಿ ಇಳಿದು ಮನೆಗೆ ತೆರಳಿದ್ದು, ನಿದ್ರಿಸುತ್ತಿದ್ದ ಮಗುವಿನ ಬಗ್ಗೆ ಯಾರಿಗೂ ಗಮನವಾಗಿಲ್ಲ. ಇನ್ನೂ ಆತಂಕಕಾರಿ ಸಂಗತಿಯೇನೆಂದರೆ, ಕ್ಯಾಬ್ ಚಾಲಕ ಮಗು ಇರುವುದನ್ನು ಗಮನಿಸದೇ ಮತ್ತೆರಡು ಟ್ರಿಪ್‌ಗಳನ್ನು ಪೂರೈಸಿದ್ದಾನೆ.
ಮನೆ ತಲುಪಿದ ಬಳಿಕ ಮಗು ಕಾಣೆಯಾಗಿರುವುದು ಗೊತ್ತಾಗಿ ಕುಟುಂಬಸ್ಥರು ಕಾಲ್ ಸೆಂಟರ್ ಮೂಲಕ ಕ್ಯಾಬ್ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಅದು ವಿಫಲವಾದ ಹಿನ್ನೆಲೆಯಲ್ಲಿ ತಕ್ಷಣ ‘ನಮ್ಮ 112’ಗೆ ಮಾಹಿತಿ ನೀಡಿದ್ದಾರೆ. ಹೋಯ್ಸಳ-51 ಪೇಟ್ರೋಲಿಂಗ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಕ್ಯಾಬ್ ನೋಂದಣಿ ಸಂಖ್ಯೆ ಆಧಾರದಲ್ಲಿ ತಂತ್ರಜ್ಞಾನ ಬಳಸಿ ಚಾಲಕನನ್ನು ಸಂಪರ್ಕಿಸಲಾಗಿದೆ.
ವಾಹನ ಪರಿಶೀಲಿಸಿದಾಗ ಜಿಯಾನ್ ಸುರಕ್ಷಿತವಾಗಿ ನಿದ್ರಿಸುತ್ತಿರುವುದು ಕಂಡುಬಂದಿದ್ದು, ಬಾಲಕನನ್ನು ಎಚ್ಚರಿಸದೆ ಅಪಾರ್ಟ್‌ಮೆಂಟ್‌ಗೆ ಮರಳುವಂತೆ ಚಾಲಕನಿಗೆ ಸೂಚಿಸಲಾಗಿದೆ. ಹುಡುಕಾಟ ಆರಂಭವಾದ 1 ಗಂಟೆಯೊಳಗೆ ಕ್ಯಾಬ್ ಅಪಾರ್ಟ್‌ಮೆಂಟ್‌ಗೆ ತಲುಪಿದ್ದು, ಬಾಲಕನನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ. ವಿಶೇಷವೆಂದರೆ, ಇಡೀ ಅವಧಿಯಲ್ಲಿ ಮಗು ನಿದ್ರೆಯಲ್ಲೇ ಇದ್ದಿದ್ದು, ಮನೆ ತಲುಪಿದ ಬಳಿಕವೇ ಎಚ್ಚರವಾಗಿದೆ ಎನ್ನಲಾಗಿದೆ.



