ಬೆಂಗಳೂರು: ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ವಾಸಕೋಶದ ಸಮಸ್ಯೆಯಿಂದಾಗಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಇದರಿಂದ ಇಂದು ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರ ತಂಡದಿಂದ ಪಾರ್ವತಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಪಾರ್ವತಿ ಅವರಿಗೆ ಡಾ ಬಿಸಿ ಶ್ರೀನಿವಾಸ್ ನೇತೃತ್ವದ ವೈದ್ಯರ ತಂಡ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಪಾರ್ವತಿ ಜೊತೆಗೆ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಇದ್ದಾರೆ.
ಪಾರ್ವತಿ ಅವರ ಆನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಅಪೋಲೊ ಆಸ್ಪತ್ರೆಗೆ ಶಾಸಕ ಶಿವಲಿಂಗೇಗೌಡ ದೌಡಾಯಿಸಿದ್ದಾರೆ. ಆದ್ರೆ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಪಾರ್ವತಿ ಅವರನ್ನು ನೋಡಲು ಯಾರನ್ನೂ ಒಳಗಡೆ ಬಿಡುತ್ತಿಲ್ಲ. ಹೀಗಾಗಿ ಶಿವಲಿಂಗೇಗೌಡ ಅವರು ಯತೀಂದ್ರ ಸಿದ್ದರಾಮಯ್ಯನವರಿಂದ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಆಸ್ಪತ್ರೆಯಿಂದ ತೆರಳಿದರು ಎಂದು ತಿಳಿದು ಬಂದಿದೆ.



