HomeGadag Newsಕಲಿತ ವಿದ್ಯೆಯನ್ನು ಇತರರಿಗೂ ತಲುಪಿಸಿ: ಶ್ರೀ ಕಾಶಿ ಜಗದ್ಗುರುಗಳು

ಕಲಿತ ವಿದ್ಯೆಯನ್ನು ಇತರರಿಗೂ ತಲುಪಿಸಿ: ಶ್ರೀ ಕಾಶಿ ಜಗದ್ಗುರುಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿದ್ಯೆಯನ್ನು ಕಲಿಯುವುದು ಮುಖ್ಯವಲ್ಲ. ಕಲಿತ ವಿದ್ಯೆಯನ್ನು ಸರ್ವರಿಗೂ ತಲುಪಿಸಿ, ಅವರನ್ನು ಜಾಗೃತರಾಗುವಂತೆ ಮಾಡುವುದು ಒಂದು ತಪಸ್ಸಿದ್ದಂತೆ. ಅದನ್ನು ನರೇಗಲ್ಲ ಹಿರೇಮಠದ ಷ.ಬ್ರ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದು ಕಾಶಿ ಪೀಠದ ಜ್ಞಾನ ಸಿಂಹಾಸನಾಧೀಶ್ವರ ಜ. ಚಂದ್ರಶೇಕರ ಭಗವತ್ಪಾದಂಗಳವರು ನುಡಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಹಿರೇಮಠದ ಜಾತ್ರಾ ಮಹೋತ್ಸವದಲ್ಲಿ ಪುರಾಣ ಪ್ರವಚನದ ಕೊನೆಯ ದಿನ ಮಂಗಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಹಿಂದೆ ನಾಲ್ಕು ವೇದಗಳನ್ನು ಓದುವ, 28 ಆಗಮಗಳನ್ನು ತಿಳಿಯುವ ಜನರಿದ್ದರು. ಆದರೆ ಈಗ ಅವುಗಳನ್ನು ಓದುವವರೂ ಇಲ್ಲ, ಓದಲು ಸಮಯವೂ ಇಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಸಿದ್ಧಾಂತ ಶಿಖಾಮಣಿಯು ಸರಿಯಾದ ಉತ್ತರವನ್ನು ಕೊಡುತ್ತದೆ. ಆದ್ದರಿಂದ ಸಿದ್ಧಾಂತ ಶಿಖಾಮಣಿಯನ್ನು ಓದುವ ಕಾರ್ಯವನ್ನು ರೂಢಿಸಿಕೊಳ್ಳಬೇಕು. ಸಿದ್ಧಾಂತ ಶಿಖಾಮಣಿಯನ್ನು ಓದಲು ಸಾಧ್ಯವಾಗದಿದ್ದರೆ ಅದರ ಸೇವೆಯನ್ನು ಮಾಡಿದರೂ ಸಾಕು, ಅದು ನಿಮಗೆ ಸದ್ಗತಿ ಕೊಡುವಂತಹ ಪ್ರಸಾದಿತ ಗ್ರಂಥವಾಗಿದೆ ಎಂದು ಜಗದ್ಗುರುಗಳು ತಿಳಿಸಿದರು.

ಸಿದ್ಧಾಂತ ಶಿಖಾಮಣಿ ನಿಮ್ಮದೇ ಪುರಾಣ. ಅದನ್ನು ಕಳೆದ ಎರಡು ದಶಕಗಳಿಂದ ಕೇಳುತ್ತ ಬಂದಿರುವ ನೀವೇ ಭಾಗ್ಯವಂತರು. ಮನುಷ್ಯ ಜನ್ಮ ದೊರಕುವುದೇ ದುರ್ಲಭ. ಅದನ್ನು ಸುಖಾ ಸುಮ್ಮನೆ ಕಳೆಯಬಾರದು. ಮಾನವ ಜನ್ಮವನ್ನು ಎಂದಿಗೂ ವ್ಯರ್ಥ ಮಾಡಿಕೊಳ್ಳದೆ, ದಾನ-ಧರ್ಮ, ಸತ್ಸಂಗದಲ್ಲಿ ಕಾಲ ಕಳೆಯುತ್ತ ಸಾರ್ಥಕಪಡಿಸಿಕೊಳ್ಳಬೇಕು. ಅದನ್ನು ಇಲ್ಲಿನ ಹಿರೇಮಠ ಮಾಡುತ್ತ ಬಂದಿರುವುದು ನಮಗೆ ವಿಶೇಷವಾದ ಆನಂದವನ್ನುಂಟುಮಾಡಿದೆ ಎಂದು ಜಗದ್ಗುರುಗಳು ತಿಳಿಸಿದರು.

ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀಮಠದ ಬೆಳವಣಿಗೆಯ ಬಗ್ಗೆ ಜಗದ್ಗುರುಗಳಿಗೆ ಪರಿಚಯಿಸಿದರು. ಇಲ್ಲಿ ಜಾತ್ರೆಯನ್ನು ಪ್ರಾರಂಭಿಸಿ ಮುಂದಿನ ವರ್ಷಕ್ಕೆ ಹತ್ತು ವರ್ಷಗಳಾಗುತ್ತವೆ. ಈ ದಶಮಾನೋತ್ಸವದ ಸಂದರ್ಭದಲ್ಲಿ ಜಗದ್ಗುರುಗಳು ಇಲ್ಲಿಯೇ ಐದು ದಿನಗಳ ಕಾಲ ವಾಸ್ತವ್ಯ ಮಾಡಿ ನಮಗೆಲ್ಲ ಮಾರ್ಗದರ್ಶನ ಮಾಡಬೇಕೆಂದು ವಿನಂತಿಸಿದರು.

ವೇದಿಕೆಯ ಮೇಲೆ ಡಾ. ಕೆ.ಬಿ. ಧನ್ನೂರ, ಎಸ್.ಎಸ್. ಮೇಟಿ, ವೀರೇಶ ಕೂಗುಮಠ, ವಿ.ಕೆ. ಗುರುಮಠ ಮುಂತಾದ ಗಣ್ಯರಿದ್ದರು. ನಿವೃತ್ತ ಶಿಕ್ಷಕ ಎಂ.ಎಸ್ ದಢೇಸೂರಮಠ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಜಗದ್ಗುರುಗಳು ಕಾಶಿನಾಥನ ಕಾಶಿ ಯಾತ್ರೆ ಮತ್ತು ವೈದ್ಯ ಪಂ. ಕಾಶಿನಾಥ ಶಾಸ್ತಿçಗಳು ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿದರು.

ಸಾನ್ನಿಧ್ಯ ವಹಿಸಿದ್ದ ಅಬ್ಬಿಗೇರಿ-ಸಿದ್ದರಬೆಟ್ಟದ ಷ.ಬ್ರ. ಶ್ರೀ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಭಗವಂತನ ಪ್ರತಿ ಅವತಾರದ ಹಿಂದೆಯೂ ಒಂದು ಸಂದೇಶವಿದೆ. ದುಷ್ಟರನ್ನು ಸದೆಬಡಿದು ಶಿಷ್ಟರನ್ನು ಪಾಲಿಸುವುದಕ್ಕಾಗಿ ಭಗವಂತ ಕಾಲಕಾಲಕ್ಕೆ ಅವತಾರವೆತ್ತಿ ಬರುತ್ತಾನೆ. ಶ್ರೀ ವೀರಭದ್ರೇಶ್ವರನನ್ನು ಸರ್ವರೂ ಪೂಜಿಸುತ್ತಾರೆ. ಅವನು ಸಕಲರನ್ನೂ ಕಾಯುತ್ತಾನೆ. ಅವನ ಪುರಾಣ ಕೇಳಿದ ನೀವೇ ಧನ್ಯರು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!