ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ಕ್ಷೇತ್ರದ ಸಾರಂಗಮಠದ ಶ್ರೀ ಜಾತವೇದಮುನಿ ಶಿವಾಚಾರ್ಯ ಸ್ವಾಮಿಗಳು ಅನಾರೋಗ್ಯದಿಂದಾಗಿ ಶನಿವಾರ ಶಿವೈಕ್ಯರಾಗಿರುವುದಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಕೂಡಲಸಂಗಮ ಕ್ಷೇತ್ರದಲ್ಲಿ ಉಜ್ಜಯಿನಿ ಪೀಠದ ಶಾಖಾ ಮಠವಾಗಿರುವ ಸಾರಂಗಮಠದ ಜಾತವೇದಮುನಿ ಶಿವಾಚಾರ್ಯರು ಚಿಕ್ಕ ವಯಸ್ಸಿನಲ್ಲಿ ಮಠದ ಜವಾಬ್ದಾರಿಯನ್ನು ಹೊತ್ತು ಮಠದ ಅಭಿವೃದ್ಧಿ ಮತ್ತು ಭಕ್ತ ಸಂಕುಲಕ್ಕೆ ಮಾರ್ಗದರ್ಶನ ನೀಡಿದ ನೆನಪು ಮರೆಯಲಾಗದು. ಸಾರಂಗಮಠವು ಸಮಾಜಕ್ಕೆ ಅಮೂಲ್ಯ ಮಾರ್ಗದರ್ಶನ ಕೊಟ್ಟ ಶ್ರೀ ಮಠವಾಗಿದೆ. ಈ ಪವಿತ್ರ ಪರಂಪರೆಯನ್ನು ಲಿಂಗೈಕ್ಯರಾದ ಜಾತವೇದಮುನಿ ಶಿವಾಚಾರ್ಯರಿಗೆ ಶ್ರೀ ಜಗದ್ಗುರು ಪಂಚಾಚಾರ್ಯರು ಕೂಡಲಸಂಗಮಕ್ಕೆ ಆಗಮಿಸಿದಾಗ ಶ್ರೀ ಗುರು ಪಟ್ಟಾಧಿಕಾರ ಮಾಡಿ ಆಶೀರ್ವದಿಸಲಾಗಿತ್ತು. ಸದಾ ಕ್ರಿಯಾಶೀಲರಾದ ಶ್ರೀಗಳವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಇಂದು ಲಿಂಗೈಕ್ಯರಾಗಿರುವುದು ಭಕ್ತ ಸಮುದಾಯಕ್ಕೆ ಅತ್ಯಂತ ದುಃಖವನ್ನು ಉಂಟುಮಾಡಿದೆ.
ಅವರ ಅಗಲಿಕೆಯಿಂದ ಉಂಟಾದ ಸ್ಥಾನವನ್ನು ಪುತ್ರವರ್ಗ ಪರಂಪರೆಯAತೆ ಅವರ ವಂಶದಲ್ಲಿ ಯಾರಾದರೊಬ್ಬ ಸಮರ್ಥ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದು ಅತ್ಯಂತ ಸೂಕ್ತ. ಶ್ರೀಗಳವರ ಪವಿತ್ರ ಆತ್ಮಕ್ಕೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಚಿರಶಾಂತಿಯಿತ್ತು ಮಠದ ವಂಶಸ್ಥರಿಗೆ ಹಾಗೂ ಭಕ್ತ ಸಂಕುಲಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅನುಗ್ರಹಿಸಲೆಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.