ಕಲಬುರಗಿ:- ಇಲ್ಲಿನ ಪ್ರತಿಷ್ಟಿತ ಜಿಮ್ಸ್ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ ಬಟಾ ಬಯಲಾಗಿದೆ.
ಆಸ್ಪತ್ರೆಯ ಐಸಿಯುನಲ್ಲಿ ಶನಿವಾರ ಸಂಜೆ ವಿದ್ಯುತ್ ಕೈ ಕೊಟ್ಟಿದ್ದರಿಂದ ಐಸಿಯುನಲ್ಲಿದ್ದ ರೋಗಿಗಳು ಪರದಾಡುವಂತಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ವಿದ್ಯುತ್ ಕೈ ಕೊಟ್ಟ ಬಳಿಕ ಬ್ಯಾಟರಿ ಮೂಲಕ ಆಕ್ಸಿಜನ್ ಪೂರೈಕೆ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ. ಆದರೆ, ಬ್ಯಾಟರಿಗಳು ಬ್ಯಾಕ್ ಅಪ್ ಬಾರದ ಹಿನ್ನಲೆಯಲ್ಲಿ ಆಫ್ ಆಗಿತ್ತು. ಬಳಿಕ ವೈದ್ಯಕೀಯ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ವಿದ್ಯುತ್ ಕೈ ಕೊಟ್ಟಾಗ ಬ್ಯಾಟರಿ ಬ್ಯಾಕಪ್ ಇಲ್ಲದೆ ಆಕ್ಸಿಜನ್ ಕೊರತೆಯಿಂದ ರೋಗಿಗಳು ಪರದಾಡಿದ್ದರಿಂದ ರೋಗಿಗಳ ಕುಟುಂಬಸ್ಥರು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ದ ಕಿಡಿ ಕಾರಿದ್ದಾರೆ.
ಶ್ವಾಸಕೋಶ, ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಐಸಿಯುನಲ್ಲಿ ಪರದಾಟ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.