ಗದಗ: ವಿದ್ಯುತ್ ವ್ಯತ್ಯಯದಿಂದಾಗಿ ಗದಗ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣವಾಗಿ ಕಗ್ಗತ್ತಲಲ್ಲಿ ಮುಳುಗಿದ್ದು, ರೋಗಿಗಳು ತೀವ್ರ ಪರದಾಟ ಅನುಭವಿಸಿದ ಘಟನೆ ಇಂದು ನಡೆದಿದೆ.
ಮೇಂಟೆನನ್ಸ್ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಗದಗ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಆದರೆ ಈ ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆಯೇ ಇಲ್ಲ. ಯುಪಿಎಸ್ ವ್ಯವಸ್ಥೆ ಸಹ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.
ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ವೈದ್ಯರು ಮೊಬೈಲ್ ಟಾರ್ಚ್ ಲೈಟ್ ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಔಷಧಿ ವಿತರಣೆಗೂ ಸಹ ಮೊಬೈಲ್ ಟಾರ್ಚ್ ಬೆಳಕಿನ ಅವಲಂಬನೆ ಮಾಡಬೇಕಾಯಿತು. ಇದರಿಂದ ಔಷಧಿ ವ್ಯತ್ಯಾಸ ಆಗುವ ಭೀತಿ ವ್ಯಕ್ತವಾಗಿತ್ತು.
ಇನ್ನು ವಿದ್ಯುತ್ ವ್ಯತ್ಯಯದ ಕಾರಣ ಲ್ಯಾಬ್ ಪರೀಕ್ಷೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಫ್ರೀಜಿಂಗ್ ಅಗತ್ಯವಿರುವ ಚುಚ್ಚುಮದ್ದುಗಳು ಹಾಳಾಗುವ ಆತಂಕವೂ ಎದುರಾಗಿದೆ.
ಸರ್ಕಾರ ಗ್ಯಾರಂಟಿ ಕೋಡೋ ಭರದಲ್ಲಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಕಡೆಗಣಿಸಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.ಆಸ್ಪತ್ರೆಯಲ್ಲಿ ಕೂಡಲೇ ಜನರೇಟರ್ ಹಾಗೂ ಯುಪಿಎಸ್ ವ್ಯವಸ್ಥೆ ಅಳವಡಿಸಿ, ರೋಗಿಗಳಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



