ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧನಕ್ಕೊಳಗಾಗಿರುವ ನಟಿ ಪವಿತ್ರಾ ಗೌಡ ಮತ್ತೆ ಜೈಲು ಜೀವನ ಮುಂದುವರಿಸಬೇಕಾದ ಸ್ಥಿತಿಗೆ ತಲುಪಿದ್ದಾರೆ. ಒಮ್ಮೆ ಜಾಮೀನಿನ ಮೇಲೆ ಹೊರಬಂದಿದ್ದ ಪವಿತ್ರಾ ಗೌಡ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಪರ ವಕೀಲ ಬಾಲನ್ ಹಾವೇರಿಯಲ್ಲಿ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. “ಪವಿತ್ರಾ ಗೌಡಗೆ ಇನ್ನೊಂದು ವರ್ಷ ಜೈಲು ಗ್ಯಾರಂಟಿ” ಎಂಬ ಮಾತು ಪ್ರಕರಣಕ್ಕೆ ಹೊಸ ಶಾಕಿಂಗ್ ಟ್ವಿಸ್ಟ್ ನೀಡಿದೆ. ಜಾಮೀನು ಯಾವಾಗ ಸಿಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಕನಿಷ್ಠ ಒಂದು ವರ್ಷವಾದರೂ ಆಗಬಹುದು” ಎಂದು ಹೇಳಿದ್ದಾರೆ.
ಪೊಲೀಸ್ ತನಿಖೆಯ ಮೇಲೂ ವಕೀಲ ಬಾಲನ್ ಗಂಭೀರ ಆರೋಪ ಮಾಡಿದ್ದಾರೆ. ಎರಡು ಕಾರುಗಳಿಂದ ಕೂದಲು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದರೂ, ಎಫ್‌ಎಸ್‌ಎಲ್ ವರದಿಯಲ್ಲಿ ಅದು ಮಹಿಳೆಯ ಕೂದಲು ಎಂದು ಮಾತ್ರ ಉಲ್ಲೇಖವಾಗಿದೆ. ತನಿಖಾಧಿಕಾರಿ ಅದನ್ನು ಪವಿತ್ರಾ ಗೌಡ ಅವರ ಕೂದಲು ಎಂದು ಹೇಳುತ್ತಿರುವುದಾಗಿ ವಕೀಲರು ತಿಳಿಸಿದ್ದಾರೆ.
ಈ ಪ್ರಕರಣ ಈಗಾಗಲೇ ದಾರಿ ತಪ್ಪಿದೆ ಎಂದು ಅಭಿಪ್ರಾಯಪಟ್ಟಿರುವ ವಕೀಲ ಬಾಲನ್, ಸತ್ತ ವ್ಯಕ್ತಿಯ ಸಾವು ಸಹಜವಾದದ್ದು ಅಲ್ಲ ಎಂದು ಹೇಳಿದ್ದಾರೆ. ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಸುಳ್ಳಾಗಿದೆ ಎಂಬುದು ತಮ್ಮ ಅಭಿಪ್ರಾಯ ಎಂದೂ ಅವರು ತಿಳಿಸಿದ್ದಾರೆ. ಆದರೂ ನ್ಯಾಯಾಧೀಶರ ಮೇಲೆ ನಮಗೆ ನಂಬಿಕೆಯಿದೆ, ಅಂತಿಮ ತೀರ್ಪು ನ್ಯಾಯಾಲಯದಿಂದಲೇ ಬರಲಿದೆ ಎಂದು ಅವರು ಹೇಳಿದ್ದಾರೆ.
ಹೈಕೋರ್ಟ್‌ಗೆ ಏಳು ಜನರನ್ನು ಟಾರ್ಗೆಟ್ ಮಾಡಿ ಹೋದರೂ, ಎ1 ಮತ್ತು ಎ2 ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಈ ಪ್ರಕರಣದ ಪರಿಣಾಮವನ್ನು ಅನುಭವಿಸುತ್ತಿದ್ದಾರೆ ಎಂದು ವಕೀಲ ಬಾಲನ್ ಹೇಳಿದ್ದಾರೆ.



