ಪವಿತ್ರಾ ಗೌಡ ಮುಗ್ಧೆ, ಪ್ರಕರಣದಲ್ಲಿ ಆಕೆಯದ್ದು ಯಾವುದೇ ತಪ್ಪಿಲ್ಲ: ಮಾಜಿ ಪತಿ ಸಂಜಯ್ ಸಿಂಗ್

0
Spread the love

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ಪವಿತ್ರಾ ಗೌಡ ಜಾಮೀನಿನ ಮೂಲಕ ಡಿ.17ರಂದು ಜೈಲಿನಿಂದ ಹೊರ ಬಂದಿದ್ದಾರೆ. ಪವಿತ್ರಾ ಗೌಡ ರಿಲೀಸ್ ಆದ ಬೆನ್ನಲ್ಲೇ ನಟಿಯ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯಿಸಿದ್ದು ಆಕೆ ಮುಗ್ದೆ, ಪ್ರಕರಣದಲ್ಲಿ ಆಕೆಯದ್ದು ಯಾವುದೇ ತಪ್ಪಿಲ್ಲ ಎಂದಿದ್ದಾರೆ.

Advertisement

ಪವಿತ್ರಾಗೆ ಗೌಡ ರಿಲೀಸ್ ಆದ ಖುಷಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಜಯ್ ಸಿಂಗ್, ಜಾಮೀನು ಸಿಕ್ಕಿರೋದು ಖುಷಿ ಆಗುತ್ತಿದೆ. ಈ ಕೇಸ್ ಮುಗಿದು ಹೋದರೆ ಸಾಕು ಅನಿಸುತ್ತಿದೆ. ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಸಿಗಲಿ. ನಾನು ಮೊದಲೇ ಹೇಳ್ತಿದ್ದೆ ಈಗಲೂ ಹೇಳ್ತಿದ್ದೀನಿ, ಪವಿತ್ರಾ ಮುಗ್ಧೆ ಆಕೆ ಯಾವ ತಪ್ಪು ಮಾಡಿಲ್ಲ. ಇನ್ಮುಂದೆಯೂ ದರ್ಶನ್ ಜೊತೆ ಪವಿತ್ರಾ ಚೆನ್ನಾಗಿರುತ್ತಾಳೆ ಅಂದರೆ ಇರಲಿ. ಆಕೆ ಸ್ಟ್ರಾಂಗ್ ಲೇಡಿ, ಈ ಪ್ರಕರಣದಲ್ಲಿ ಪವಿತ್ರಾದೇನು ತಪ್ಪಿಲ್ಲ. ಆಕೆಗೆ ಕೆಟ್ಟ ಮೆಸೇಜ್ ಬಂದಿರೋದಕ್ಕೆ ಯಾರಿಗೆ ಹೇಳಬೇಕಿತ್ತೋ ಅವರಿಗೆ ತಿಳಿಸಿದ್ದಾರೆ. ಇದರಲ್ಲಿ ಆಕೆಯದ್ದು ಏನೂ ತಪ್ಪಿಲ್ಲ ಎಂದಿದ್ದಾರೆ. ಇನ್ನೂ ದರ್ಶನ್ ಆಸ್ಪತ್ರೆಯಲ್ಲಿದ್ದಾರೆ ಅಂತ ಗೊತ್ತಾಯ್ತು, ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಇನ್ನೂ ಪವಿತ್ರಾ ಮನೆ ದೇವರು ವಜ್ರಮುನೇಶ್ವರ, ಹೀಗಾಗಿ ಜೈಲಿಂದ ರಿಲೀಸ್ ಆದ್ಮೇಲೆ ಆ ದೇವರಿಗೆ ಹರಕೆ ತೀರಿಸಿದ್ದಾರೆ. ಈ ಹಿಂದೆ ನಾನು ಮತ್ತು ಪವಿತ್ರಾ ಎಷ್ಟೋ ಸಲ ಆ ದೇವಸ್ಥಾನಕ್ಕೆ ಹೋಗಿದ್ದೇವೆ. ನಮ್ಮ ಮಗಳ ಮುಡಿ ಕೊಡುವ ಶಾಸ್ತ್ರವನ್ನು ಅಲ್ಲೇ ಮಾಡಿದ್ದೇವೆ. ಅಲ್ಲಿ ನಮ್ಮ ಕೆಲಸ ಆಗೋದಿದ್ರೆ ದೇವರು ಬಲಗಡೆಯಿಂದ ಹೂ ಪ್ರಸಾದ ಕೊಡುತ್ತದೆ. ಪವಿತ್ರಾಗೆ ಆ ದೇವರ ಬಗ್ಗೆ ಭಾರೀ ನಂಬಿಕೆ ಇದೆ ಎಂದು ಸಂಜಯ್ ಸಿಂಗ್ ಹೇಳಿದರು.

ಈಗ ಬೆಂಗಳೂರಲ್ಲಿ ಇದ್ದರೂ ನಾನಂತೂ ಅವರಿಗೆ ಕಾಲ್ ಮಾಡಲ್ಲ ಮಾತಾಡಲ್ಲ. ಆದರೆ ನಾನು ಅವರ ಕಾಲ್‌ಗೆ ಕಾಯುತ್ತಿದ್ದೇನೆ. ಅವರಾಗಿಯೇ ಕಾಲ್ ಮಾಡಿದ್ದರೂ ನನಗೆ ಖುಷಿ. ಅವರ ಮೇಲಿನ ನನ್ನ ಪ್ರೀತಿ ಶಾಶ್ವತವಾಗಿ ಇರುತ್ತದೆ. ಪವಿತ್ರಾಗೆ ಸದಾ ಒಳ್ಳೆಯದಾಗಲಿ ಅಂತ ಬಯಸುತ್ತೇನೆ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here