ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಗುರುವಾರ ವಿಶಾಖಪಟ್ಟಣದ ಇಂದಿರಾ ಗಾಂಧಿ ಪ್ರಾಣಿ ಉದ್ಯಾನವನಕ್ಕೆ ಭೇಟಿ ನೀಡಿ, ಪ್ರಾಣಿ ಸಂರಕ್ಷಣೆಯತ್ತ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ತಾಯಿ ಅಂಜನಾ ದೇವಿಯ ಹುಟ್ಟುಹಬ್ಬದ ನೆನಪಿಗಾಗಿ ಮೃಗಾಲಯದಲ್ಲಿರುವ ಎರಡು ಜಿರಾಫೆಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆಯುವುದಾಗಿ ಘೋಷಿಸಿ, ಅವುಗಳ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ.
ಮೃಗಾಲಯಕ್ಕೆ ಭೇಟಿ ನೀಡಿದ ವೇಳೆ ಪವನ್ ಕಲ್ಯಾಣ್, ಹೊಸದಾಗಿ ನಿರ್ಮಿಸಲಾದ ಕರಡಿ ಆವರಣವನ್ನು ಉದ್ಘಾಟಿಸಿದರು. ನಂತರ ನೀರಾನೆ, ಕೃಷ್ಣಮೃಗ, ಹುಲಿ ಹಾಗೂ ಸಿಂಹಗಳನ್ನು ಇರಿಸಿರುವ ವಲಯಗಳಿಗೆ ಭೇಟಿ ನೀಡಿ, ಪ್ರಾಣಿಗಳ ಆಹಾರ ವ್ಯವಸ್ಥೆ, ಆರೋಗ್ಯ ಹಾಗೂ ಸಂರಕ್ಷಣಾ ಕ್ರಮಗಳ ಕುರಿತು ಮೃಗಾಲಯದ ಕ್ಯುರೇಟರ್ ಅವರಿಂದ ಮಾಹಿತಿ ಪಡೆದರು. ಅಲ್ಲದೇ ಆನೆ ಮತ್ತು ಜಿರಾಫೆಗಳಿಗೆ ಸ್ವತಃ ಆಹಾರ ನೀಡುವ ಮೂಲಕ ಪ್ರಾಣಿಪ್ರೇಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, “ಮೃಗಾಲಯಗಳು ವನ್ಯಜೀವಿ ಸಂರಕ್ಷಣೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತವೆ. ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಸುಮಾರು 650 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ವಿಶಾಖಪಟ್ಟಣ ಮೃಗಾಲಯದಲ್ಲಿ ನೂರಾರು ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ಸುರಕ್ಷಿತ ಮತ್ತು ಸ್ವಚ್ಛ ವಾತಾವರಣದಲ್ಲಿ ವಾಸಿಸುತ್ತಿವೆ” ಎಂದು ಹೇಳಿದರು.
ಇದೇ ವೇಳೆ ಅವರು ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಾಣಿ ಸಂರಕ್ಷಣೆಯಲ್ಲಿ ಪಾಲುದಾರರಾಗುವಂತೆ ಮನವಿ ಮಾಡಿ, “ಕಾರ್ಪೊರೇಟ್‌ಗಳು ತಮ್ಮ ಇಷ್ಟದ ಪ್ರಾಣಿಗಳನ್ನು ದತ್ತು ಪಡೆದು ಮೃಗಾಲಯಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ನಮ್ಮ ಇಡೀ ಕುಟುಂಬವೇ ಪ್ರಾಣಿ ಪ್ರಿಯರು. ಪ್ರಾಣಿ ಕಲ್ಯಾಣ ನಮ್ಮ ಆದ್ಯತೆಯಾಗಿದೆ” ಎಂದು ಹೇಳಿದರು.



