ಪವನ್ ಕಲ್ಯಾಣ್ ಅವರು ರಾಜಕೀಯ ಹಾಗೂ ಸಿನಿಮಾ ಎರಡನ್ನೂ ಸಮತೋಲನದಿಂದ ಮುಂದುವರಿಸುತ್ತಿದ್ದಾರೆ. ಆಂಧ್ರ ವಿಧಾನಸಭೆ ಚುನಾವಣೆಗೂ ಮುಂಚೆ ಒಪ್ಪಿಕೊಂಡಿದ್ದ ಮೂರು ಸಿನಿಮಾಗಳ ಪೈಕಿ ಎರಡು ಸಿನಿಮಾಗಳನ್ನು ಪೂರ್ಣಗೊಳಿಸಿರುವ ಅವರು, ಸದ್ಯ ಮೂರನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಪವನ್ ಕಲ್ಯಾಣ್ ಒಪ್ಪಿಕೊಂಡಿದ್ದ ‘ಹರಿ ಹರ ವೀರ ಮಲ್ಲು’, ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ‘ಓಜಿ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ದಾಖಲಿಸಿತ್ತು. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಮಾಫಿಯಾ ಹಿನ್ನೆಲೆಯ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ನಿರ್ದೇಶನವನ್ನು ಸುಜೀತ್ ಮಾಡಿದ್ದರು.
ಚುನಾವಣೆಯ ಸಮಯದಲ್ಲೇ ‘ಓಜಿ’ ಸಿನಿಮಾ ಬಗ್ಗೆ ಸಾರ್ವಜನಿಕರಿಗೆ ಮನವಿ ಮಾಡಿದ್ದ ಪವನ್ ಕಲ್ಯಾಣ್, ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕನಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ‘ಓಜಿ’ಯಲ್ಲಿ ತಮ್ಮನ್ನು ವಿಭಿನ್ನ ಹಾಗೂ ಸ್ಟೈಲಿಷ್ ಆಗಿ ತೋರಿಸಿದ ನಿರ್ದೇಶನಕ್ಕೆ ಮೆಚ್ಚುಗೆ ಸೂಚಿಸಿ, ಸುಜೀತ್ ಅವರಿಗೆ ಐಶಾರಾಮಿ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಭಾರತದಲ್ಲಿ ಒಂದು ಕೋಟಿಯಿಂದ ಮೂರು ಕೋಟಿ ರೂಪಾಯಿ ಮೌಲ್ಯ ಹೊಂದಿರುವ ಈ ಕಪ್ಪು ಬಣ್ಣದ ಡಿಫೆಂಡರ್ ಕಾರಿನ ಉಡುಗೊರೆ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬೆಳವಣಿಗೆಯೊಂದಿಗೆ, ಪವನ್ ಕಲ್ಯಾಣ್ ಮತ್ತು ಸುಜೀತ್ ಮತ್ತೊಮ್ಮೆ ಹೊಸ ಸಿನಿಮಾದಲ್ಲಿ ಕೈಜೋಡಿಸುವ ಸಾಧ್ಯತೆ ಇದೆ ಎಂಬ ಚರ್ಚೆಯೂ ಚಿತ್ರರಂಗದಲ್ಲಿ ಜೋರಾಗಿದೆ.



