ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಕ್ಷಯ ಮುಕ್ತ ರಾಷ್ಟ್ರ ನಿರ್ಮಿಸಲು ಎಲ್ಲರೂ ಶ್ರಮಿಸೋಣ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಹೇಳಿದರು.
ಮುಂಡರಗಿ ಪಟ್ಟಣದ ತಾಲೂಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಆಂದೋಲನ ಅಭಿಯಾನದ ಪ್ರಯುಕ್ತ ಕ್ಷಯರೋಗಿಗಳಿಗೆ ಚೈತನ್ಯ ಪೌಷ್ಠಿಕ ಪೂರಕ ಆಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಕ್ಷಯ ರೋಗ ಬಗ್ಗೆ ಭಯದ ವಾತವಾರಣ ಇತ್ತು. ಇಂದು ಭಾರತದಲ್ಲಿ ಉತ್ತಮ ರೀತಿಯ ಔಷಧಿಗಳಿವೆ. ರೋಗಿಗಳು ಸರಿಯಾಗಿ ೬ ತಿಂಗಳು ಚಿಕಿತ್ಸೆಯನ್ನು ಪಡೆಯಬೇಕು, ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕು. ಕ್ಷಯ ರೋಗವು ಗುಣಮುಖವಾಗುವ ರೋಗವಾಗಿದೆ. ಹಾಗಾಗಿ ಭಯಪಡದೇ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯವನ್ನು ಸದುಪಯೋಗ ಪಡೆದುಕೊಂಡು ಪೌಷ್ಠಿಕ ಆಹಾರ ಸೇವಿಸಿ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ಜೀವನದಲ್ಲಿ ಮನುಷ್ಯನಿಗೆ ಆರೋಗ್ಯ ತುಂಬಾ ಮುಖ್ಯವಾಗಿದ್ದು, ಎಷ್ಟೇ ಶ್ರೀಮಂತನಾಗಿ ದುಡ್ಡು ಹೊಂದಿದ್ದರೂ ಅನಾರೋಗ್ಯಕ್ಕೆ ತುತ್ತಾದ್ದಾಗ ಎಲ್ಲರೂ ಅಸಹಾಯಕರಾಗುತ್ತರೆ. ಹಾಗಾಗಿ ಉತ್ತಮ ಆರೋಗ್ಯ ಹೊಂದಿದ್ದರೆ ಜೀವನದಲ್ಲಿ ಏನನ್ನಾದರು ಸಾಧಿಸಬಹುದು ಎಂದು ಹೇಳಿದರು.
ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ಚಂದ್ರು ಲಾಮಾಣಿ ಅವರು ಜನರ ಅಪೇಕ್ಷೆಯಿಂದ ಇಂದು ಶಾಸಕರಾಗಿ ಸದಾ ಬಡವರ ಬಗ್ಗೆ ಕಾಳಜಿ ಹೊಂದಿ ಆರೋಗ್ಯ, ಕುಡಿಯುವ ನೀರು, ಶಾಲಾ ಕೊಠಡಿಗಳ ಸುಧಾರಣೆ ಸೇರಿದಂತೆ ಕ್ಷೇತ್ರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಹಾಗೇಯೇ ತಮ್ಮನ್ನು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಶಕ್ತಿ ತುಂಬಿದ್ದಾರೆ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಅರುಂಧತಿ ಕುಲಕರ್ಣಿ ಮಾತನಾಡಿ, ೧೦೦ ದಿನದ ಕ್ಷಯರೋಗ ನಿರ್ಮೂಲನೆ ಅಭಿಯಾನ ಯಶಸ್ವಿಯಾಗಿ ಮುಂದುವರೆಯುತ್ತಿದೆ. ವಿಶ್ವದೊಳಗೆ ಅತೀ ಹೆಚ್ಚು ಕ್ಷಯ ರೋಗಿಗಳು ಭಾರತದಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕ್ಷಯರೋಗ ಮುಕ್ತ ಭಾರತ ನಿರ್ಮಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕ್ಷಯ ರೋಗಿಗಳು ಯಾವುದೇ ಭಯಪಡದೇ ಉಚಿತವಾಗಿ ದೊರೆಯುವ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಕುಮಾರಸ್ವಾಮಿ ಹೀರೆಮಠ, ಆರೋಗ್ಯ ನಿರೀಕ್ಷಣಾಧಿಕಾರಿ ಎ.ಎ. ಅಳವಂಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್‌ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಸದ್ಯಸೆ ಜ್ಯೋತಿ ಹಾನಗಲ್, ಅಂದಾಪ್ಪ ಉಳ್ಳಾಗಡ್ಡಿ, ಜಾನು ಲಮಾಣಿ, ತಾಲೂಕಾ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ, ಪುರಸಭೆ ಸದಸ್ಯರು ಸೇರಿದಂತೆ ಗಣ್ಯರು ಹಾಜರಿದ್ದರು.
ಜಯಶ್ರೀ ಮತ್ತು ತಂಡದವರು ಪ್ರಾರ್ಥನಾ ಗೀತೆ ಪ್ರಸ್ತುತಪಡಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎಸ್. ಸಜ್ಜನ ಸ್ವಾಗತಿಸಿದರು. ಈರಮ್ಮ ಕುಂದಗೋಳ ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕರು ಸುಖಾಸುಮ್ಮನೆ ವೈದ್ಯರನ್ನು ದೂಷಿಸುವುದನ್ನು ಬಿಟ್ಟು ವೈದ್ಯರ ಮೇಲೆ ಭರವಸೆ, ನಂಬಿಕೆ ಇಟ್ಟು ಪರಿಸ್ಥಿತಿಯನ್ನು ಅರಿತುಕೊಂಡು ವೈದ್ಯರಿಗೆ ಸಹಕಾರ ನೀಡಬೇಕು. ಹಾಗೇ ಎಲ್ಲರೂ ಊಟದ ಪದ್ಧತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕು. ೧೮-೨೦ ವಯಸ್ಸಿನ ಯುವಕರು ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಹಾಗಾಗಿ ಎಲ್ಲಾ ಯುವಕರ ಆರೋಗ್ಯ ಬಗ್ಗೆ ಗಮನಹರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.



