ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ವೀರ, ಧೀರ, ನಿಸ್ವಾರ್ಥ ಸೇವೆ ಹಾಗೂ ಕರ್ತವ್ಯ ನಿಷ್ಠೆ ತೋರಿದ ಪೊಲೀಸ್ ಸಿಬ್ಬಂದಿಗಳನ್ನು ನೆನೆಯುವ ನಿಟ್ಟಿನಲ್ಲಿ ಪ್ರತಿ ವರ್ಷ ಏಪ್ರಿಲ್ 2ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುವುದು. ಬೇರೆ ಬೇರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆ ಅತ್ಯಂತ ಶಿಸ್ತಿನ ಇಲಾಖೆಯಾಗಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿರುತ್ತಾರೆ ಎಂದು ನಿವೃತ್ತ ಪೊಲೀಸ್ ಸಬ್ ಇನ್ಸಪೆಕ್ಟರ್ ಎಸ್.ಎಲ್. ಕಸ್ತೂರಿ ಹೇಳಿದರು.
ಮಂಗಳವಾರ ಗೋಕುಲ ರಸ್ತೆಯ ಹೊಸ ಸಶಸ್ತç ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಮಾತನಾಡಿ, ಕಳೆದ ಬಾರಿ 33 ಲಕ್ಷ 50 ಸಾವಿರ ಮೌಲ್ಯದ ಪೊಲೀಸ್ ಧ್ವಜಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಸಾರಿ ಹೆಚ್ಚಿನ ಮೊತ್ತದ ಹಣ ಸಂಗ್ರಹಣೆಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. 2023-24ರಲ್ಲಿ ಪೊಲೀಸರ ಮಕ್ಕಳ ಎಸ್.ಎಸ್.ಎಲ್.ಸಿ ಹಾಗೂ ನಂತರದ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ರೂ. 15 ಲಕ್ಷ 7 ಸಾವಿರ ಮೊತ್ತದ ಶೈಕ್ಷಣಿಕ ಸಹಾಯ ಧನವನ್ನು ಒದಗಿಸಲಾಗಿದೆ. ಸೇವೆಯಿಂದ ವಯೋನಿವೃತ್ತಿ ಹೊಂದಿದ 42 ಸಿಬ್ಬಂದಿಗಳಿಗೆ ತಲಾ 5 ಸಾವಿರ ವೆಚ್ಚದಲ್ಲಿ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿ ಆತ್ಮೀಯವಾಗಿ ಸನ್ಮಾನಿಸಲಾಗಿದೆ ಎಂದರು.
ಮಾರುತಿ ಹೆಗಡೆ ಅವರ ನೇತೃತ್ವದಲ್ಲಿ ವಿವಿಧ ಪಡೆಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಡಿಸಿಪಿಗಳಾದ ಯಲ್ಲಪ್ಪ ಕಾಶಪ್ಪನವರ, ಎಸಿಪಿಗಳಾದ ಆರ್.ಕೆ. ಪಾಟೀಲ, ವಿಜಯಕುಮಾರ ತಳವಾರ, ನಿವೃತ್ತ ಡಿಐಜಿಪಿ ರವಿಕುಮಾರ ನಾಯಕ, ನಿವೃತ್ತ ಡಿಸಿಪಿ ಎಚ್.ಎ. ದೇವರಹೊರು, ನಿವೃತ್ತ ಡಿಎಸ್‌ಪಿಗಳಾದ ಆರ್.ಐ. ಅಂಗಡಿ, ಪ್ರಭುದೇವ ಮಾನೆ, ಶಿವಶಂಕರ ಗಡಾದಿ, ವಿ.ಬಿ. ಬೆಳವಡಿ, ನಿವೃತ್ತ ಪಿಐ ಅರುಣಕುಮಾರ ಸಾಳುಂಕೆ, ನಿವೃತ್ತ ಪಿಎಸ್‌ಐ ಆರ್.ಬಿ. ನೀರಲಗಿ, ಎಸ್.ಎನ್. ಬಾಳಿಕಾಯಿ, ವಿ.ಎಸ್. ಅಂಗಡಿ, ಹುಬ್ಬಳ್ಳಿ-ಧಾರವಾಡ ನಗರದ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಟ್ರಾಫಿಕ್ ವಾರ್ಡನ್, ಕುಟುಂಬಸ್ಥರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಧಾರವಾಡ ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ ಆಯುಕ್ತರಾದ ರಾಜೀವ ಎಂ.ಸ್ವಾಗತಿಸಿದರು. ಪೊಲೀಸ್ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು. ಹುಬ್ಬಳ್ಳಿ-ಧಾರವಾಡ ನಗರ ಅಪರಾಧ ಮತ್ತು ಸಂಚಾರ ಉಪ ಪೊಲೀಸ ಆಯುಕ್ತರಾದ ರವೀಶ ಸಿ.ಆರ್. ವಂದಿಸಿದರು.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಹಕಾರ ಹಾಗೂ ಮಾರ್ಗದರ್ಶನದಿಂದ ಉತ್ತಮ ಸೇವೆ ಸಲ್ಲಿಸಬಹುದಾಗಿದೆ. ನಾವು ನಮ್ಮ ಕರ್ತವ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ಜನಸ್ನೇಹಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಇಲಾಖೆಯಲ್ಲಿ ದಿನದ 24 ಗಂಟೆಗಳ ಕಾಲ ಒತ್ತಡದಲ್ಲಿ ಸೇವೆ ಸಲ್ಲಿಸುತ್ತಿರುತ್ತೇವೆ. ಹೀಗಾಗಿ ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತ ಎಂದು ಎಸ್.ಎಲ್. ಕಸ್ತೂರಿ ಅಭಿಪ್ರಾಯಪಟ್ಟರು.