ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣದಲ್ಲಿ ಒಂದೇ ಒಂದು ಗುರುತಿಸುವಂತಹ ಸುಂದರ ಉದ್ಯಾನವನವಿದ್ದರೆ ತೋರಿಸಿ. ಇದ್ದ ಕೆಲ ಉದ್ಯಾನವನಗಳೇ ನೋಡುವಂತಿಲ್ಲ. ಇನ್ನೇನು ಹೊಸ ಉದ್ಯಾನ ನಿರ್ಮಿಸುತ್ತೀರಿ ಎಂದು ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಕೊಟಗಿ ಮುಖ್ಯಾಧಿಕಾರಿ ರಮೇಶ ಹೊಸಮನಿಯವರನ್ನು ತರಾಟೆಗೆ ತೆಗೆದುಕೊಂಡರು.
ಮಂಗಳವಾರ ಪುರಸಭೆಯ ಸಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿಗಳು ಉದ್ಯಾನವನಗಳ ನಿರ್ವಹಣೆ ಕುರಿತು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸದಸ್ಯ ಗದಿಗೆಪ್ಪ ಕಿರೇಸೂರ ಪಟ್ಟಣದಲ್ಲಿರುವ ಉದ್ಯಾನವನಗಳಿಗೆ ಸರಿಯಾಗಿ ನೀರು ಪೂರೈಕೆಯಾಗದೆ ಬಾಡುತ್ತಿವೆ ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸದಸ್ಯೆ ವಿಜಯಲಕ್ಷ್ಮೀ ಕೊಟಗಿ ತಮ್ಮ ಆಕ್ರೋಶ ಹೊರಹಾಕಿದರು.
ಮಾರ್ಚ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಪುರಸಭೆಯ ಜಮೆ ಮತ್ತು ಖರ್ಚಿನ ಬಗ್ಗೆ ಮುಖ್ಯಾಧಿಕಾರಿಗಳು ವರದಿಯನ್ನು ಒಪ್ಪಿಸುತ್ತಿದ್ದಂತೆ, ಸದಸ್ಯ ಸಂತೋಷ ಕಡಿವಾಲ ಮಾತನಾಡಿ, ಹಣವನ್ನೇನೋ ಖರ್ಚು ಮಾಡಿದ್ದೀರಿ. ಕೆಲಸ ಎಲ್ಲಿ ಮಾಡಿದ್ದೀರಿ ಎಂಬುದನ್ನು ವಿವರಿಸಿ ಎಂದಾಗ ಪಕ್ಷ ಭೇದ ಮರೆತ ಸದಸ್ಯರು ಯಾವ ಉದ್ದೇಶಕ್ಕೆ ಹಣ ಖರ್ಚಾಗಿದೆ ಎಂಬ ನಿಖರ ಮಾಹಿತಿಯನ್ನು ಸಭೆಗೆ ನಿಡಿ ಎಂದು ಆಗ್ರಹಿಸಿದರು. ಇದರಿಂದ ವಿಚಲಿತರಾದ ಮುಖ್ಯಾಧಿಕಾರಿಗಳು ವರದಿಯ ಅನುಸಾರ ಮಾಹಿತಿ ನೀಡಿದರು.
ಸದಸ್ಯ ದುರ್ಗಪ್ಪ ಹಿರೇಮನಿ ಮಾತನಾಡಿ, ಪುರಸಭೆಯಲ್ಲಿ ಗುತ್ತಿಗೆ ಅಥವಾ ದಿನಗೂಲಿ ಎಂದು ದುಡಿಯುತ್ತಿರುವ ಕಾರ್ಮಿಕರಿಗೆ ಕೂಲಿ ಪಾವತಿಸಿ. ಅವರು ಬಡವರು. 12 ತಿಂಗಳಾದರೂ ಅವರಿಗೆ ಸಂಬಳವಿಲ್ಲ ಎಂದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಎಂದರು. ಈ ಮಾತಿಗೆ ಸದಸ್ಯ ಸಂಗನಗೌಡ ಪಾಟೀಲ ಕೂಡ ದನಿಗೂಡಿಸಿದರು.
ಬಸಮ್ಮ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ, ಸದಸ್ಯ ಬಾವಾಸಾಬ ಬೆಟಗೇರಿ ಮುಂತಾದವರು ಉಪಸ್ಥಿತರಿದ್ದರು.