HomePolitics Newsಆದ್ಯತೆ ಮೇರೆಗೆ ಗುತ್ತಿಗೆದಾರರ ಬಿಲ್ ಬಾಕಿಗಳ ಪಾವತಿ: ಡಿಸಿಎಂ ಡಿ.ಕೆ.ಶಿವಕುಮಾರ್

ಆದ್ಯತೆ ಮೇರೆಗೆ ಗುತ್ತಿಗೆದಾರರ ಬಿಲ್ ಬಾಕಿಗಳ ಪಾವತಿ: ಡಿಸಿಎಂ ಡಿ.ಕೆ.ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು, ಮಾ.04: “ಆದ್ಯತೆ ಮೇರೆಗೆ ಗುತ್ತಿಗೆದಾರರ ಬಿಲ್ ಗಳನ್ನು ಪಾವತಿ ಮಾಡಲಾಗುವುದು. ಸಣ್ಣ, ಸಣ್ಣ ಬಿಲ್ ಗಳನ್ನು ಪಾವತಿ ಮಾಡುವುದಾಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಆಶ್ವಾಸನೆ ನೀಡಿದ್ದು, ಹಣ ಬಂದ ತಕ್ಷಣ ಪಾವತಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಗುತ್ತಿಗೆದಾರರ ಬಿಲ್ ಬಾಕಿ ವಿಚಾರ ಹಾಗೂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಭೇಟಿ ಬಗ್ಗೆ ಕೇಳಿದಾಗ, “ಬಿಜೆಪಿ ಕಾಲದಲ್ಲಿ ಅವರು ನನ್ನ ಇಲಾಖೆಯೊಂದರಲ್ಲಿಯೇ ರೂ.1.20 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳಿಗೆ ಆದೇಶ ನೀಡಿ ಹೋಗಿದ್ದು ಕೆಲಸ ನಡೆಯುತ್ತಿದೆ.

ಪ್ರಸ್ತುತ ರೂ.6 ಸಾವಿರ ಕೋಟಿಯಷ್ಟು ಮಾತ್ರ ಬಿಲ್ ನೀಡಲು ಅವಕಾಶವಿದೆ. ಕೇಂದ್ರದಿಂದ 5,300 ಕೋಟಿ ಕೊಡುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ಗುತ್ತಿಗೆದಾರರು ಅವರ ನೋವನ್ನು ಹೇಳಿಕೊಂಡಿದ್ದಾರೆ” ಎಂದರು.

ಖರ್ಗೆ ಅವರನ್ನು ಭೇಟಿ ಮಾಡದೆ ಬಿಜೆಪಿ ಕಚೇರಿಗೆ ಹೋಗಲೇ?

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ವಿಚಾರ ಕೇಳಿದಾಗ, “ನಾನು ಖರ್ಗೆ ಅವರನ್ನು ಭೇಟಿ ಮಾಡದೇ ಬಿಜೆಪಿ ಕಚೇರಿಗೆ ಭೇಟಿ ನೀಡಲೇ?. ಅವರು ರಾಷ್ಟ್ರದ ಅಧ್ಯಕ್ಷರು, ನಾನು ರಾಜ್ಯದ ಅಧ್ಯಕ್ಷ. ಅವರು ನಮ್ಮ ರಾಜ್ಯಕ್ಕೆ ಬಂದಾಗ ಹೋಗಿ ಭೇಟಿ ಮಾಡಿ ಗೌರವ ನೀಡುವುದು ನಮ್ಮ ಕೆಲಸ. ಪಕ್ಷದ ವಿಚಾರಗಳು, ನೂತನ ಕಾಂಗ್ರೆಸ್ ಕಚೇರಿಗೆ ಗುದ್ದಲಿ ಪೂಜೆ ಮಾಡುತ್ತಿದ್ದು, ಈ ತಿಂಗಳಿನಲ್ಲಿಯೇ ದಿನಾಂಕ ನೀಡಿ ಎಂದು ಮನವಿ ಮಾಡಲು ಹೋಗಿದ್ದೆ” ಎಂದರು. ಸಂದರ್ಭ ಬೇರೆ ರೀತಿಯಿದ್ದು, ಯಾವುದೇ ಭೇಟಿಗೂ ನಾನಾ ಅರ್ಥಗಳು ಉಂಟಾಗುತ್ತವೆ ಎಂದು ಕೇಳಿದಾಗ, “ಯಾವ ರೀತಿ ಬೇಕಾದರೂ ಅರ್ಥ ಮಾಡಿಕೊಳ್ಳಲಿ, ಸಾವಿರ ಚರ್ಚೆ ಮಾಡಲಿ” ಎಂದು ಹೇಳಿದರು.

ಟೀಕೆ ಮಾಡಲಿ ಎಂದೇ ಹೇಳಿಕೆ ನೀಡಿದ್ದೇನೆ

ನಟ್ಟು- ಬೋಲ್ಟ್ ವಿಚಾರವಾಗಿ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ಕೇಳಿದಾಗ, “ಟೀಕೆ ಮಾಡಲಿ ಎಂದು ನಾನು ಹೇಳಿಕೆ ನೀಡಿದ್ದು. ನಾನು ಅವರಿಗೆಲ್ಲಾ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ಸಹಾಯ ತೆಗೆದುಕೊಂಡವರಿಗೆ ಗೊತ್ತಿದೆ. ನಾನು ಅವರಿಗೆ ರಾಜ್ಯದ ಹಿತಕ್ಕಾಗಿ ಹೇಳಿದ್ದೇನೆ. ನೆಲ, ಜಲ, ಭಾಷೆ ಉಳಿಯಬೇಕು. ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ ಯಾರಿಗಾಗಿ ಮಾಡಿರುವುದು. ಚಿತ್ರರಂಗ ಬೆಳೆಯಲಿ ಎಂದು. ಅವರ ಕ್ಷೇತ್ರದ ಬಗ್ಗೆ ಅವರೇ ಪ್ರಚಾರ ಮಾಡಿಕೊಳ್ಳದೇ ಇದ್ದರೆ ನಾವು ಬೆಳಗ್ಗೆ ಸಂಜೆ ಪ್ರಚಾರ ಮಾಡಿಕೊಳ್ಳಲು ಆಗುತ್ತದೆಯೇ?” ಎಂದು ತಿರುಗೇಟು ನೀಡಿದರು.

ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ. ಅವರು ಬೆಳೆಯಲು ಸರ್ಕಾರ, ಜನ ಬೇಕು:

ಚಿತ್ರರಂಗದವರಿಗೆ ಆಹ್ವಾನವನ್ನೇ ಮಾಡಿಲ್ಲ ಎನ್ನುವ ನಾಗಭರಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಆಹ್ವಾನ ಮಾಡದೇ ಇರಬಹುದು. ಈ ಬಗ್ಗೆ ನಮ್ಮ ಇಲಾಖೆಯ ತಪ್ಪಿದೆಯೋ ಯಾರ ತಪ್ಪಿದೆ ಗೊತ್ತಿಲ್ಲ. ಆದರೆ ಈ ಕಾರ್ಯಕ್ರಮ ಅವರದ್ದು. ನನಗೆ ಗೊತ್ತು ಟೀಕೆ ಮಾಡುತ್ತಾರೆ ಎಂದು. ಆದರೆ ಎಚ್ಚರಿಕೆ ಕೊಡಬೇಕಲ್ಲವೇ? ಟೀಕೆ ಮಾಡುವುದರಿಂದ ನನಗೆ ಬೇಸರವಿಲ್ಲ. ನಾವು ತಪ್ಪು ಮಾಡಿದ್ದರೇ ಸರಿ ಮಾಡಿಕೊಳ್ಳೋಣ, ಅವರು ತಪ್ಪು ಮಾಡಿದ್ದರೆ ಅವರು ಸರಿ ಮಾಡಿಕೊಳ್ಳಲಿ. ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ. ಅವರು ಬೆಳೆಯಬೇಕು ಎಂದರೆ ಸರ್ಕಾರ ಹಾಗೂ ಜನ ಬೇಕು” ಎಂದು ಖಡಕ್ ಉತ್ತರ ನೀಡಿದರು.

ಬಿಬಿಎಂಪಿ ಸರ್ಕಾರಿ ಕಚೇರಿಗಳಿಗೆ ತೆರಿಗೆ ಬಾಕಿ ಬಗ್ಗೆ ನೋಟಿಸ್ ನೀಡಿರುವ ಬಗ್ಗೆ, “ಹೌದು ಹಣ ಸಂಗ್ರಹ ಮಾಡಬೇಕಲ್ಲವೇ. ಬಿಬಿಎಂಪಿ ಕಾನೂನು ಪ್ರಕಾರ ಕೆಲಸ ಮಾಡುತ್ತಿದೆ. ಸರ್ಕಾರಿ ಕಚೇರಿಯಾದರೂ ಒಂದಷ್ಟು ಬಿಲ್ ಗಳನ್ನು ಕಟ್ಟಲೇ ಬೇಕು. ವಿದ್ಯುತ್ ಬಿಲ್ ಸೇರಿದಂತೆ ಇತರೇ ಬಿಲ್ ಗಳನ್ನು ಕಟ್ಟಲೇಬೇಕು. ಈ ವಿಚಾರ ಕಳೆದ 20- 30 ವರ್ಷಗಳಿಂದ ನಡೆಯುತ್ತಿದೆ” ಎಂದರು.

ರಾಜಭವನ, ವಿಧಾನಸೌಧಗಳು ಈ ವ್ಯಾಪ್ತಿಗೆ ಬರುತ್ತವೆಯೇ ಎಂದಾಗ, “ಹೌದು ಎಲ್ಲರೂ ತೆರಿಗೆ ಪಾವತಿ ಮಾಡಲೇಬೇಕು” ಎಂದರು. ಸರ್ಕಾರಿ ಕಟ್ಟಡಗಳ ಆಸ್ತಿ ತೆರಿಗೆ ಬಾಕಿ ರೂ.150 ಕೋಟಿಗೂ ಹೆಚ್ಚು ಬಾಕಿ ಇದೆ ಎಂದು ಮರು ಪ್ರಶ್ನಿಸಿದಾಗ, “ಎಲ್ಲವನ್ನು ಸಂಗ್ರಹ ಮಾಡಲಾಗುವುದು. ಯಾವುದಕ್ಕೂ ನಾವು ವಿನಾಯಿತಿ ನೀಡಬಾರದು. ಎಲ್ಲರೂ ತೆರಿಗೆ ಕಟ್ಟಲೇಬೇಕು. ವಿದ್ಯುತ್ ಪೂರೈಕೆದಾರರಿಗೆ ನಾವು ಬಿಲ್ ನೀಡದೇ ಇದ್ದರೇ ಶೇ 18 ರಷ್ಟು ಬಡ್ಡಿ ತೆರಬೇಕಾಗುತ್ತದೆ” ಎಂದರು.ಶಾಸಕರ ಸಂಬಳ ಹೆಚ್ಚಳದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದರು.

ಸ್ಪೀಕರ್ ಖಾದರ್ ಅವರು ಇತಿಹಾಸ ಬರೆಯುತ್ತಿದ್ದಾರೆ

ವಿಧಾನಸೌಧ ನಡೆದು ಬಂದ ದಾರಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟನೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು, “ಇತಿಹಾಸ ಮರೆತವನು ಇತಿಹಾಸ ಸೃಷ್ಟಿ ಮಾಡಲಾರ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ವಿಧಾನಸೌಧ ಮತ್ತು ಸುವರ್ಣಸೌಧಕ್ಕೆ ವಿಶೇಷ ಮೆರುಗು ನೀಡುತ್ತಿದ್ದಾರೆ. ಸುವರ್ಣ ಸೌಧದಲ್ಲಿ ಬಸವಣ್ಣನವರ ಕಾಲದ ಪ್ರಪಂಚದ ಮೊದಲ ಸಂಸತ್ತು ಅನುಭವ ಮಂಟಪದ ಚಿತ್ರವನ್ನು ಅನಾವರಣಗೊಳಿಸಿದರು.

ಮೈಸೂರು 150 ವರ್ಷಗಳ ಕಾಲದ ಹಿಂದೆ ನಡೆಯುತ್ತಿದ್ದ ವಿಧಾನಸಭೆ ಕಲಾಪದ ಚಿತ್ರದಿಂದ ಹಿಡಿದು, ನೆಹರು ಅವರು ವಿಧಾನಸೌಧಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಚಿತ್ರವನ್ನು ಕೂಡ ಪ್ರದರ್ಶಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಸಾರ್ವಜನಿಕರಿಗೂ ಉಪಯೋಗವಾಗಬೇಕು, ಅವರಿಗೂ ಜ್ಞಾನೋದಯವಾಗಬೇಕು, ಇತಿಹಾಸದ ಪರಿಚಯವಾಗಬೇಕು. ಖಾದರ್ ಅವರು ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ” ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!