ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಜೀವಾತ್ಮ ಪರಮಾತ್ಮನಾಗಲು, ಅಂಗ ಲಿಂಗವಾಗಲು ಭವಿ ಭಕ್ತನಾಗಲು, ಜ್ಞಾನ, ಕ್ರಿಯಾತ್ಮಕ ಆಚರಣೆಯಿಂದ ಜೀವನ ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ 23ನೇ ವರುಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಸ್ಕಾರ-ಸಂಸ್ಕೃತಿಗಳ ಪರಿಪಾಲನೆಯಿಂದ ಮಾನವ ಜೀವನಕ್ಕೆ ಅಮೂಲ್ಯ ಬೆಲೆ ದೊರಕುತ್ತದೆ. ಜಗದ ಜನರ ಮನದ ಅಜ್ಞಾನ ಕಳೆದು ಜ್ಞಾನದ ಬುತ್ತಿಯನ್ನಿತ್ತು ಉದ್ಧರಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಿವಜ್ಞಾನದ ಅರಿವು ಮತ್ತು ಆಚರಣೆಯಿಂದ ಬದುಕಿನಲ್ಲಿ ಶಾಂತಿ-ಸಮಾಧಾನ ದೊರಕುತ್ತವೆ. ಅಸ್ಪçಶೋದ್ಧಾರ ಮತ್ತು ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ತಂದುಕೊಟ್ಟ ಮೊದಲ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿಯ ಮೂಲಕ ಸರ್ವ ಸಮುದಾಯಗಳ ಅಭ್ಯುದಯ ಏಳಿಗೆಗಾಗಿ ಶ್ರಮಿಸಿದ ಶಕ್ತಿ ಅವರದು.
ಹೆಣ್ಣು ಅಬಲೆಯಲ್ಲ ಸಬಲೆಯೆಂದು ಅರಿವು ನೀಡಿ ಜಾಗೃತಿಯ ಅರಿವು ತೋರಿದವರು. ಮಹಿಳೆಯರಿಂದಲೇ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಬೆಳೆದು ಬಂದಿದೆ. ಇಂದಿನ ಕಲಿಗಾಲದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಅನಾಚಾರ, ಕೊಲೆಗಳು ಹೆಚ್ಚುತ್ತಿವೆ. ಈ ಪಾಶವೀ ಕೃತ್ಯದಿಂದ ಮಹಿಳೆಯರನ್ನು ಸಂರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯಿದೆ. ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳ ಸಂಸ್ಕಾರ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.
ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು. ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆಯ ಹುಬ್ಬಳ್ಳಿ ತಾಲೂಕಾ ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಮತ್ತು ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸುಮಂಗಲಾ ಹಿರೇಮಠ ಮತ್ತು ವಿದ್ಯಾ ಹೊರಕೇರಿ ಇವರಿಂದ ವೇದಘೋಷ, ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಸದಸ್ಯರಿಂದ ಪ್ರಾರ್ಥನಾ ಭಕ್ತಿಗೀತೆ ಜರುಗಿತು. ಶೈಲಜಾ ಹಿರೇಮಠ ಮತ್ತು ಶೃತಿ ಭೂಸನೂರಮಠ ನಿರೂಪಿಸಿದರು.
ಸಮಾರಂಭದ ನಂತರ ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಸದಸ್ಯರಿಂದ ನೃತ್ಯ ರೂಪಕ ಹಾಗೂ ಜೀವಿ ಚಿತ್ರಾಲಯದವರಿಂದ ನಿರ್ಮಾಣಗೊಂಡ ಶ್ರೀ ಜಗದ್ಗುರು ರೇಣುಕ ಬೋಧಾಮೃತ ಟೆಲಿಚಿತ್ರ ಪ್ರದರ್ಶನ ಜರುಗಿತು.
ಪಾರ್ವತಿ ಅಭಿವೃದ್ಧಿ ಮಂಡಳದ ಅಧ್ಯಕ್ಷರಾದ ಇಂಧುಮತಿ ಮಾನ್ವಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಉತ್ಕೃಷ್ಟ ಸಂಸ್ಕೃತಿಯ ಸಂವರ್ಧನೆಗಾಗಿ ಇಂದು ಮಹಿಳೆ ಶ್ರಮಿಸುತ್ತಿದ್ದಾಳೆ. ಪುರುಷರಿಗಿಂತಲೂ ಸಾಧನೆಯಲ್ಲಿ ಹೆಣ್ಣು ಮಕ್ಕಳು ಮುಂದೆ ಇದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸುವುದರ ಮೂಲಕ ವೀರಶೈವ ಸಂಸ್ಕೃತಿ ಬೆಳೆಸುತ್ತಿರುವುದು ಸಂತೋಷದ ಸಂಗತಿ ಎಂದರು.