ಆಧ್ಯಾತ್ಮ ಸಾಧನೆಯಿಂದ ನೆಮ್ಮದಿ ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

0
Spread the love

ವಿಜಯಸಾಕ್ಷಿ ಸುದ್ದಿ, ಅಜ್ಜಂಪುರ: ಮಾನವ ಜೀವನದ ಶ್ರೇಯಸ್ಸಿಗೆ ಮತ್ತು ಉನ್ನತಿಗೆ ಧರ್ಮಾಚರಣೆ ಅಗತ್ಯ. ಭೌತಿಕ ಸಂಪತ್ತಿನಿಂದ ಶಾಂತಿ ಸಿಗದು. ಆಧ್ಯಾತ್ಮ ಸಾಧನೆಯಿಂದ ಮಾತ್ರ ನೆಮ್ಮದಿ ಸಾಧ್ಯ. ತಪಶ್ಚರ್ಯದಿಂದ ಆತ್ಮಬಲ ಸಂವೃದ್ಧಿಯಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಶನಿವಾರ ಬುಕ್ಕಾಂಬುಧಿ ತಪೋಬೆಟ್ಟದಲ್ಲಿ ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಕೈಗೊಂಡ ಮೌನ ಪೂಜಾನುಷ್ಠಾನ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಪರಮ ತಪಸ್ವಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಬುಕ್ಕಾಂಬುಧಿ ಬೆಟ್ಟದಲ್ಲಿ ಮೂರು ತಿಂಗಳ ಕಾಲ ತಪೋನುಷ್ಠಾನ ಮಾಡಿ ಜಾಗೃತಗೊಳಿಸಿದ ಪವಿತ್ರ ಕ್ಷೇತ್ರದಲ್ಲಿ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು 11 ದಿನಗಳ ಮೌನ ತಪೋನುಷ್ಠಾನ ಕೈಗೊಂಡು ಇಂದು ಮಂಗಲಗೊಳಿಸುತ್ತಿರುವುದು ಸಂತೋಷದ ಸಂಗತಿ.

ಶಿವತಪ, ಶಿವಕರ್ಮ, ಶಿವಜಪ, ಶಿವಧ್ಯಾನ ಮತ್ತು ಶಿವಜ್ಞಾನ ಎಂಬ ಪಂಚ ಯಜ್ಞಗಳ ಮೂಲಕ ಶಿವನನ್ನು ಪೂಜಿಸುವ, ಧ್ಯಾನಿಸುವ ವಿಚಾರವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಲೋಕ ಕಲ್ಯಾಣ ಆತ್ಮಬಲ ವೃದ್ಧಿಗಾಗಿ ಕೈಗೊಂಡ ಅನುಷ್ಠಾನ ಭಕ್ತ ಸಂಕುಲಕ್ಕೆ ಹರುಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಕವಲೇದುರ್ಗ ಅನುಷ್ಠಾನ ಶ್ರೀಗಳಿಗೆ ರೇಶ್ಮೆ ಮಡಿ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಶ್ರೀಗಳವರ ಮಾರ್ಗದರ್ಶನದಲ್ಲಿ ಹಳೇಹುಬ್ಬಳ್ಳಿ ಪಂಚಗೃಹ ಹಿರೇಮಠದ ನಿಯೋಜಿತ ಉತ್ತರಾಧಿಕಾರಿಗಳಾದ ರೇಣುಕ ಪ್ರಸಾದ ಅವರು ಕೂಡಾ 11 ದಿನಗಳ ವಿಶೇಷ ಪೂಜೆ ಕೈಗೊಂಡಿದ್ದರು. ಶ್ರೀ ಪೀಠದಿಂದ ಅವರಿಗೂ ರೇಶ್ಮೆ ಶಾಲು ಸ್ಮರಣಿಕೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.

ಶ್ರೀ ಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಮ್. ವೀರಭದ್ರಪ್ಪ, ಕಾರ್ಯದರ್ಶಿ ಹೆಚ್.ಪಿ. ಸುರೇಶ, ಚಿಕ್ಕತೊಗಲೇರಿಯ ಈಶಣ್ಣ, ದಾವಣಗೆರೆ ಕೊಟ್ರೇಶ್ ಮೊದಲ್ಗೊಂಡು ಟ್ರಸ್ಟಿನ ಎಲ್ಲ ಸದಸ್ಯರು ಮತ್ತು ಶಾಂಭವಿ ಮಹಿಳಾ ಮಂಡಳದ ಸದಸ್ಯರು ಉಪಸ್ಥಿತರಿದ್ದು ಶ್ರೀಗಳಿಗೆ ಗೌರವ ಸಮರ್ಪಿಸಿದರು.

ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು. ಸಮಾರಂಭದಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು. ಆಗಮಿಸಿದ ಸಮಸ್ತರಿಗೂ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಪೂಜಾನುಷ್ಠಾನ ಮಂಗಲಗೊಳಿಸಿದ ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಯಾವುದೋ ಜನ್ಮದ ಪುಣ್ಯದ ಫಲದಿಂದ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಪಗೈದ ಈ ಕ್ಷೇತ್ರದಲ್ಲಿ ಪೂಜಾನುಷ್ಠಾನ ಮಾಡಿರುವುದು ನಮಗೆ ಒಂದು ವಿಶೇಷ ಆತ್ಮಬಲ ಮತ್ತು ಮನಃಶಾಂತಿ ಕಂಡಿದೆ. ಪೂರ್ವಜರು ಹಾಕಿದ ಹೆದ್ದಾರಿಯಲ್ಲಿ ನಡೆದು ಭಕ್ತ ಸಮುದಾಯಕ್ಕೆ ಸನ್ಮಾರ್ಗದರ್ಶನ ಮಾಡಬೇಕೆಂಬುದೇ ನಮ್ಮ ಧ್ಯೇಯವೆಂದರು.


Spread the love

LEAVE A REPLY

Please enter your comment!
Please enter your name here