ವಿಜಯಸಾಕ್ಷಿ ಸುದ್ದಿ, ರೋಣ : ಸೆಪ್ಟೆಂಬರ್ ತಿಂಗಳಲ್ಲಿ ಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಎಲ್ಲರೂ ಸೇರಿ ಶಾಂತ ರೀತಿಯಿಂದ ಆಚರಿಸಬೇಕು ಎಂದು ರೋಣ ಠಾಣೆಯ ಪಿಎಸ್‌ಐ ಪ್ರಕಾಶ ಬಣಕಾರ ಹೇಳಿದರು.
ಅವರು ರವಿವಾರ ಠಾಣೆಯ ಸಭಾಂಗಣದಲ್ಲಿ ಜರುಗಿದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ರೋಣ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿಯೂ ಸರ್ವ ಧರ್ಮದವರು ಏಕತೆ ಹಾಗೂ ಸಹೋದರತೆಯಿಂದ ಸಹಬಾಳ್ವೆಯನ್ನು ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಏಕತೆ ಎಲ್ಲ ಹಬ್ಬಗಳಲ್ಲಿಯೂ ಅಡಕವಾಗಿರಬೇಕು. ಹೀಗಾಗಿ ಎರಡೂ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು ಎಂದರು.
ಮುಖ್ಯವಾಗಿ ಹಬ್ಬಗಳ ನೆಪದಲ್ಲಿ ಯಾರಾದರೂ ಅಹಿತಕರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹಬ್ಬಗಳು ಮನಸ್ಸಿಗೆ ನೆಮ್ಮದಿಯನ್ನು ನಿಡಬೇಕೇ ಹೊರತು ಹಾಳು ಮಾಡಬಾರದು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿ ಎಂದರು.
ಪುರಸಭೆ ಸದಸ್ಯರಾದ ಬಾವಾಸಾಬ ಬೆಟಗೇರಿ, ಸಂಗಪ್ಪ ಜಿಡ್ಡಿಬಾಗಿಲ, ದಾವಲಸಾಬ ಬಾಡಿನ, ದುರಗಪ್ಪ ಹಿರೇಮನಿ ಸೇರಿದಂತೆ ಅನೇಕ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.