ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿನ ಭ್ರಷ್ಟತೆ, ಅಜ್ಞಾನ, ಮೌಢ್ಯ ತೊಲಗಿಸಲು ನಾವು ಸಮಾಜ ಸೇವೆ ಮಾಡಬೇಕು. ಸೇವೆಗಾಗಿ ಬಾಳು ಎಂದು ಬದುಕಬೇಕು. ಸಮಾಜ ಸೇವೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಶಾಂತಿ ಲಭಿಸುತ್ತದೆ, ಸಹನಾಗುಣವು ಹೆಚ್ಚುತ್ತದೆ ಎಂದು ಮೈಲಾರ ದೇವರಗುಡ್ಡದ ಮಾಲತೇಶ ದೇವಸ್ಥಾನದ ಟ್ರಸ್ಟ್ ಸಮಿತಿ ನಿರ್ದೇಶಕರಾಗಿ ಆಯ್ಕೆಯಾದ ವಿದ್ಯಾವರ್ಧಕ ಸಂಸ್ಥೆಯ ಗೌರವ ಕಾರ್ಯದರ್ಶಿ ವೀರನಗೌಡ ಪಾಟೀಲ ನುಡಿದರು.
ಅವರು ಶ್ರೀ ಸಿ.ಎಸ್. ಪಾಟೀಲ ಶಾಲೆಯ ಸಭಾಭವನದಲ್ಲಿ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಸಿ.ಎಸ್. ಪಾಟೀಲ ಬಾಲಕ/ಬಾಲಕಿಯರ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶ್ರೀಕ್ಷೇತ್ರ ಮೈಲಾರದ ದೇವರಗುಡ್ಡದ ಮಾಲತೇಶ ದೇವಸ್ಥಾನದ ಟ್ರಸ್ಟ್ ಸಮಿತಿಗೆ ನಿರ್ದೇಶಕರಾಗಿ ಆಯ್ಕೆಯಾದ ನಿಮಿತ್ತ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಮೈಲಾರಗುಡ್ಡದಲ್ಲಿ ಅನೇಕ ಸುಧಾರಣಾ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕಿದೆ. ಲಕ್ಷಾಂತರ ಭಕ್ತರು ಸೇರುವ ಸ್ಥಳದ ಸ್ವಚ್ಛತೆಯಂತಹ ಅಗತ್ಯತೆಗಳಿಗೆ ಗಮನ ಕೊಡಬೇಕಾಗಿದೆ ಎಂದರು.
ಶಿಕ್ಷಕರಾದ ಬಿ.ಎಸ್. ಹೊನಗುಡಿ ಮಾತನಾಡುತ್ತಾ, ಮೈಲಾರ ಗುಡ್ಡದಂತಹ ಮಹಾಕ್ಷೇತ್ರೆಕ್ಕೆ ನಮ್ಮ ಬೆಟಗೇರಿ ಭಾಗದ ವೀರನಗೌಡ ಪಾಟೀಲರು ಆಯ್ಕೆಯಾಗಿದ್ದು ನಮ್ಮ ಗದಗ-ಬೆಟಗೇರಿ ಭಾಗದ ಹೆಮ್ಮೆಯಾಗಿದೆ ಎಂದರು.
ಸಿ.ಎಸ್. ಪಾಟೀಲ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಡಾ. ರಾಮಚಂದ್ರ ಹಂಸನೂರ ಮಾತನಾಡಿದರು. ನಿವೃತ್ತ ಶಿಕ್ಷಕ ಬಿ.ವ್ಹಿ. ಹೊರಪೇಟೆ ಹಾಗೂ ನಿವೃತ್ತ ಗ್ರಂಥ ಪಾಲಕ ಆಯ್.ಎಂ. ಮಾನೇದರು ವೀರನಗೌಡರಿಗೆ ಸನ್ಮಾನಿಸಿದರು.
ನಿರ್ಮಲಾ ಲಮಾಣಿ ಪ್ರಾರ್ಥಿಸಿದರು. ಶಿಕ್ಷಕ ಎಸ್.ಎಚ್. ಕೆಂಗುಡ್ಡಪ್ಪನವರ ಸ್ವಾಗತಿಸಿದರು. ಜಿ.ಎಸ್. ಪಾಟೀಲ ಪರಿಚಯಿಸಿದರು. ಶಿಕ್ಷಕ ಎನ್.ವಿ. ಪಾಟೀಲ ನಿರೂಪಿಸಿದರು. ಎನ್.ಎಸ್. ಹಂಜಗಿ ವಂದಿಸಿದರು. ಹಿರಿಯರಾದ ಬೋದ್ಲೇಖಾನ, ಸಿದ್ಧಣ್ಣ ಕಾತರಕಿ, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಬಿ. ಹೋಳಿಯವರ, ಮುಖ್ಯಾಧ್ಯಾಪಕರಾದ ಎಸ್.ಜಿ. ಕೋಲ್ಮಿ, ಎಮ್.ಆರ್. ನಾಯಿಕ, ಆರ್.ಎಲ್. ಹಂಸನೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಎಂ.ಎಸ್. ಮಲ್ಲಾಪೂರ ಮಾತನಾಡಿ, ಲಕ್ಷಾಂತರ ಭಕ್ತರು ಸೇರುವ ಈ ಕ್ಷೇತ್ರ ಸುಧಾರಣೆ ಆಗಬೇಕಾಗಿದೆ. ಆ ಹೊಣೆಗಾರಿಕೆಯನ್ನು ನಿಭಾಯಿಸುವ ಜವಾಬ್ದಾರಿ ಹೊಸ ಕಮಿಟಿ ಮೇಲಿರುತ್ತದೆ. ವೀರನಗೌಡ ಪಾಟೀಲರಂತಹ ಉತ್ಸಾಹಿಗಳು ಕಮಿಟಿಯಲ್ಲಿದ್ದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.