ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗುರುವಾರ ಮಧ್ಯರಾತ್ರಿಯಿಂದಲೇ ಶಿರಹಟ್ಟಿ ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ಬೃಹತ್ ಹುಲ್ಲಗಾಮನ ಭವ್ಯ ಮೆರವಣಿಗೆ, ಶುಕ್ರವಾರ ಓಕುಳಿ ಹಬ್ಬವು ಸಂಭ್ರಮದಿಂದ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಶಾಂತಿಯುತವಾಗಿ ಆಚರಣೆ ಮಾಡಲಾಯಿತು.
ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಿಂದ ಹುಲ್ಲಿನಿಂದ ತಯಾರಿಸಿದ ಬೃಹತ್ ಹುಲ್ಲಗಾಮನ ಮೆರವಣಿಗೆಯು ಅಲಂಕೃತ ಎತ್ತಿನ ಬಂಡಿಯಲ್ಲಿ ಸಾವಿರಾರು ಯುವಕರ ಹಲಗೆಗಳ ಝೇಂಕಾರದ ಮಧ್ಯೆ ಬಡಿಗೇರಿ ಓಣಿ, ಕೆಳಗೇರಿ ಓಣಿ, ಶೆಟ್ಟರ ಓಣಿ, ಬಜಾರ ರಸ್ತೆ, ಮರಾಠಾ ಗಲ್ಲಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಬೆಳಗಿನ ಜಾವದವರೆಗೂ ಸಂಚರಿಸಿತು. ಪುನಃ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ತಲುಪಿ ಹುಲ್ಲಗಾಮನನ್ನು ದಹಿಸಿ, ನಂತರ ಓಕುಳಿಗೆ ಚಾಲನೆ ನೀಡಲಾಯಿತು. ಇದೇ ವೃತ್ತದಿಂದ ಎತ್ತಿನ ಬಂಡಿಯ ಸಮೇತ ಓಕುಳಿಯ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊನೆಗೆ ವಾಲ್ಮೀಕಿ ವೃತ್ತಕ್ಕೆ ಆಗಮಿಸಿ ವಿದಾಯ ಹೇಳಲಾಯಿತು.
ಈ ಸಂದರ್ಭದಲ್ಲಿ ಯುವಕರು ಹುಚ್ಚೆದ್ದು ಹಲಗೆಗಳನ್ನು ಬಡಿಯುತ್ತಾ, ಬಾಯಿ ಬಾಯಿ ಬಡಿದುಕೊಳ್ಳುತ್ತಾ, ಅಣಕು ಶವಯಾತ್ರೆಯನ್ನು ನಡೆಸಿ, ತಮ್ಮ ಸ್ನೇಹಿತರಿಗೆ ಪರಸ್ಪರ ಬಣ್ಣವನ್ನು ಹಚ್ಚಿ ಹಬ್ಬವನ್ನು ಆಚರಿಸಿದರು. ಮುಂಜಾಗೃತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನಿರ್ದೇಶನದಂತೆ ಸಿಪಿಐ ನಾಗರಾಜ ಮಾಡಳ್ಳಿ, ಶಿರಹಟ್ಟಿ ಪಿಎಸ್‌ಐ ಚನ್ನಯ್ಯ ದೇವೂರ, ಲಕ್ಷ್ಮೇಶ್ವರ ಪಿಎಸ್‌ಐ ನಾಗರಾಜ ಗಡಾದ, ಪೊಲೀಸ್ ಸಿಬ್ಬಂದಿಗಳು, ಹೋಮ್‌ಗಾರ್ಡ್ಸ್ ಮತ್ತು ಡಿಎಆರ್ ತುಕಡಿ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.