ವಿಜಯಪುರ: ಭಾರತದ ರಾಷ್ಟ್ರ ಪಕ್ಷಿ ಎನಿಸಿರುವ ನವಿಲುಗಳು ಪಕ್ಷಿಗಳಲ್ಲೇ ಅತ್ಯಂತ ಸುಂದರವಾದದ್ದು. ಅವು ಗರಿ ಬಿಚ್ಚಿದರಂತೂ ಅವುಗಳನ್ನು ನೋಡಲೆರಡು ಕಣ್ಣು ಸಾಲದು. ಹೀಗಾಗಿಯೇ ನವಿಲುಗಳನ್ನು ಬಣ್ಣಿಸಿ ಹಲವು ಹಾಡುಗಳು ಮೂಡಿ ಬಂದಿವೆ.
ಸುಂದರ ಹೆಣ್ಣಿನ ವಯ್ಯಾರವನ್ನು ನವಿಲಿನ ನೃತ್ಯಕ್ಕೆ ಕವಿ ಹೋಲಿಸುತ್ತಾನೆ. ಕೃಷ್ಣ ಪರಮಾತ್ಮನ ಶಿರದಲ್ಲಿ ಜಾಗ ಪಡೆದಿದೆ ನವಿಲಿನ ಗರಿ. ಹೀಗೆ ಪೌರಾಣಿಕವಾಗಿಯೂ ಹಿನ್ನೆಲೆಯನ್ನು ಹೊಂದಿರುವ ನವಿಲು ಮಕ್ಕಳೊಂದಿಗೆ ಬಿಸಿ ಊಟ ಸವಿದು ಮಕ್ಕಳಿಗೆ ಮನೊಲ್ಲಾಸ ಹೆಚ್ಚಿಸಿದ ಘಟನೆ ನಡೆದಿದೆ.
ಹೌದು ತಾಲ್ಲೂಕಿನ ಜಂಬಗಿ ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ವಸ್ತಿ ಶಾಲಾ ಮಕ್ಕಳು ಬಿಸಿಯೂಟ ಸೇವಿಸುವಾಗ ಹಾರಿ ಬಂದ ರಾಷ್ಟ್ರ ಪಕ್ಷಿ ಮಕ್ಕಳು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಪ್ರಾರ್ಥನೆ ಮಾಡುತ್ತಾ ಕುಳಿತಾಗ ಅನ್ನದ ತಟ್ಟೆಗೆ ಕಡೆಗೆ ಸಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿನಿಯೋರ್ವಳು ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ಬೇರೊಂದು ತಟ್ಟೆ ತೆಗೆದುಕೊಂಡಿದ್ದಾಳೆ. ವರ್ಗಾಕೋಣೆಯ ಹತ್ತಿರವು ಬಂದ ನಾಟ್ಯ ಮಯೂರಿ ಧಾನ್ಯಗಳನ್ನು ಸವಿದು ತನ್ನ ಹಸಿವನ್ನು ನೀಗಿಸಿಕೊಂಡಿದೆ.
ಶಾಲಾ ಆವರಣವು ಹಚ್ಚ ಹಸಿರಿನ ಗಿಡಗಳ ಮಧ್ಯೆ ಸುಂದರ ಪ್ರಕೃತಿ ಸೌಂದರ್ಯ ಹೊಂದಿದ್ದು, ಪ್ರತಿದಿನ ಮಕ್ಕಳು ಈ ಪ್ರಕೃತಿ ಮಡಿಲಲ್ಲಿ ಊಟ ಸೇವಿಸುತ್ತಾರೆ. ಹಸಿರು ತುಂಬಿದ ವಾತಾವರಣದಲ್ಲಿ ರಾಷ್ಟ್ರಪಕ್ಷಿ ಆಗಮಿಸಿದ್ದರಿಂದ ವಿದ್ಯಾರ್ಥಿಗಳು ಖುಷ್ ಆಗಿದ್ದಾರೆ.
ಈ ಸಂದರ್ಭದಲ್ಲಿ ಊಟ ಸವಿಯುತ್ತಾ ಮುಖ್ಯೋಪಾಧ್ಯಾಯ ಪಿ.ಪಿ.ನಾಯಿಕ, ಸಹಶಿಕ್ಷಕಿ ಎನ್.ವೈ.ರಾಠೋಡ ಮಕ್ಕಳಿಗೆ ರಾಷ್ಟ್ರಪಕ್ಷಿಯ ಕುರಿತು ಸಂಪೂರ್ಣ ವಿವರ ನೀಡಿ ಮಕ್ಕಳಿಗೆ ಪಕ್ಷಿ ಹಾಗೂ ಪ್ರಾಣಿ ಪ್ರೀತಿಯನ್ನು ಹೆಚ್ಚಿಸಿದ್ದಾರೆ.