ದಾವಣಗೆರೆ: ಲಾರಿ ಹರಿದು ಪಾದಚಾರಿ ಸಾವನ್ನಪ್ಪಿದ ಪ್ರಕರಣದಲ್ಲಿ, ಅಪಘಾತಕ್ಕೆ ಕಾರಣನಾಗಿದ್ದ ಚಾಲಕನನ್ನು 32 ವರ್ಷಗಳ ಬಳಿಕ ಜಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಗಂಗಾಧರಪ್ಪ (67) ಎಂದು ಗುರುತಿಸಲಾಗಿದೆ. ಈತ 1994ರಲ್ಲಿ ದಾವಣಗೆರೆ ಜಿಲ್ಲೆಯ ಕಲ್ಲೇದೇವಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ–13ರಲ್ಲಿ ನಡೆದ ಅಪಘಾತದಲ್ಲಿ ಪಾದಚಾರಿಯೊಬ್ಬರ ಸಾವಿಗೆ ಕಾರಣನಾಗಿದ್ದಾನೆ.
ಅಪಘಾತದ ಬಳಿಕ ಆರೋಪಿಯು ಇಷ್ಟು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಪ್ರಕರಣವನ್ನು ಪುನರ್ ಪರಿಶೀಲಿಸಿದ ಜಗಳೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ಸ್ಪೆಕ್ಟರ್ ಸಿದ್ದರಾಮಯ್ಯ ಹಾಗೂ ಎಸ್ಐ ವೆಂಕಟೇಶ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಜಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.



