ನಿಯಮ ಉಲ್ಲಂಘಿಸುವವರಿಗೆ ದಂಡದ ಬಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕಳೆದ 2-3 ದಿನಗಳಿಂದ ಪೊಲೀಸ್ ಇಲಾಖೆ ಕಾರ್ಯಪೃವೃತ್ತವಾಗಿದೆ.

Advertisement

ಪಟ್ಟಣದ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್‌ವರೆಗೆ ಸಿಸಿ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದರಿಂದ ವಾಹನಗಳ ಸುಗಮಮ ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೇ ಮದುವೆ, ಜಾತ್ರೆ, ಹಬ್ಬ, ಮುಂಗಾರು ಕೃಷಿ ಚಟುವಟಿಕೆ ಹೀಗೆ ಅನೇಕ ಕಾರಣದಿಂದ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿದೆ. ಸೋಮವಾರ ಮತ್ತು ಶುಕ್ರವಾರವಂತೂ ಸಂತೆ ಗದ್ದಲ ಜೋರಾಗಿರುತ್ತದೆ.

ಪಟ್ಟಣದ ಶ್ರೀ ಸೋಮೇಶ್ವರ ಪಾದಗಟ್ಟಿ ಹತ್ತಿರ, ಶಿಗ್ಲಿ ನಾಕಾ, ಹಾವಳಿ ಆಂಜನೇಯ ದೇವಸ್ಥಾನ, ಮಲ್ಲಾಡದ ಆಸ್ಪತ್ರೆ ಹತ್ತಿರ, ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿನ ಟ್ರಾಫಿಕ್ ಸಮಸ್ಯೆಯಿಂದ ಜನತೆ ಪರದಾಡುವಂತಾಗಿತ್ತು. ಏತನ್ಮಧ್ಯೆ ಕಳೆದ 2-3 ದಿನದಿಂದ ಕಾರ್ಯಾಚರಣೆಗಿಳಿದ ಪೊಲೀಸರು ಪಾದಗಟ್ಟಿಯಿಂದ ಒನ್‌ವೇ ಮಾಡಿ ಬೈಕ್ ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳಿಗೆ ಸಂಚಾರ ನಿರ್ಬಂಧಿಸಿದ್ದಾರೆ. ಪೊಲೀಸರು ರಸ್ತೆಗಳಲ್ಲಿ ನಿಂತು ನಿಮಯ ಮೀರುವ ವಾಹನಗಳಿಗೆ, ನಂಬರ್ ಪ್ಲೇಟ್ ಇಲ್ಲದಿರುವ, ತ್ರಿಬಲ್ ರೈಡಿಂಗ್, ವ್ಹೀಲಿಂಗ್, ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವವರಿಗೆ ದಂಡ ವಿಧಿಸುವ ಕಾರ್ಯ ಕೈಗೊಂಡಿದ್ದಾರೆ.

ಪಿಎಸ್‌ಐ ನಾಗರಾಜ ಗಡಾದ ನೇತೃತ್ವದಲ್ಲಿ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ ಸೇರಿದಂತೆ ಸಿಬ್ಬಂದಿಗಳು ಸಂಚಾರ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಳಿಗ್ಗೆ ಪೊಲೀಸ್ ಇಲಾಖೆ ಪ್ರಮುಖ ರಸ್ತೆಗಳಲ್ಲಿ ಬೀದಿಗಿಳಿದು ನಿಯಮ ಉಲ್ಲಂಘಿಸುವವರಿಗೆ ದಂಡದ ಬಿಸಿ ಮುಟ್ಟಿಸುವ ಮೂಲಕ ಸಂಚಾರ ಸಮಸ್ಯೆಗೆ ಕೊಂಚ ಪರಿಹಾರ ದೊರಕಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಪಟ್ಟಣದ ಪ್ರಮುಖ ಪೇಟೆ ರಸ್ತೆಯಲ್ಲಿ ಏಕಮುಖ ಸಂಚಾರ ಜಾರಿಗೊಳಿಸಲಾಗಿದೆ. ಬೆಳಿಗ್ಗೆ 11 ಗಂಟೆಯೊಳಗಾಗಿ ಭಾರಿ ವಾಹನಗಳು ಮತ್ತು ಗೂಡ್ಸ್ ವಾಹನಗಳಿಂದ ಸರಕುಗಳ ವಿಲೇವಾರಿ ಮಾಡಿಕೊಳ್ಳಬೇಕು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದ್ವಿಚಕ್ರ ವಾಹನ ಹೊರತುಪಡಿಸಿ ಇತರೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವದು. ದ್ವಿಚಕ್ರ ವಾಹನಗಳಿಗೆ ನಂಬರ್ ಪ್ಲೇಟ್ ಇರಬೇಕು ಹಾಗೂ ಹೆಲ್ಮೇಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲಿಸಲು ತಿಳಿಸಲಾಗಿದೆ. ಪುರಸಭೆ ಮತ್ತು ಸಾರ್ವಜನಿಕರ, ವ್ಯಾಪಾರಸ್ಥರ ಸಹಕಾರ ಅಗತ್ಯವಾಗಿದೆ.

– ನಾಗರಾಜ ಮಾಡಳ್ಳಿ, ಸಿಪಿಐ.

ನಾಗರಾಜ ಗಡಾದ, ಪಿಎಸ್‌ಐ.


Spread the love

LEAVE A REPLY

Please enter your comment!
Please enter your name here