ಹಾಸನ: ರಾಜ್ಯವನ್ನು ನಡುಗಿಸಿದ್ದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ವಿಡಿಯೋ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. SIT 13,712 ಪುಟಗಳ ಭಾರೀ ಚಾರ್ಜ್‌ಶೀಟ್ ಸಲ್ಲಿಸಿದ್ದು, 52 ಮಂದಿಯಲ್ಲಿ 39 ಜನರ ವಿರುದ್ಧ ಆರೋಪ ಸಾಬೀತಾಗಿದೆ.
ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ಆರಂಭವಾದ ಈ ತನಿಖೆಯಲ್ಲಿ, ಆರೋಪಿಗಳು 70ಕ್ಕೂ ಹೆಚ್ಚು ಪೆನ್‌ಡ್ರೈವ್‌ಗಳನ್ನು ಖರೀದಿಸಿ ವಿಡಿಯೋ ಹಂಚಿಕೆ ಮಾಡಿರುವುದು ಪತ್ತೆಯಾಗಿದೆ.
277 ಸಾಕ್ಷಿಗಳ ಹೇಳಿಕೆ, ತಾಂತ್ರಿಕ ಸಾಕ್ಷ್ಯಗಳು ಮತ್ತು FSL ವರದಿ ಆಧರಿಸಿ ದೋಷಾರೋಪಣೆ ಮಾಡಲಾಗಿದೆ.
ಎ1 ನವೀನ್‌ನಿಂದ ಹಿಡಿದು ಕಾರ್ತಿಕ್, ಚೇತನ್, ಲಿಖಿತ್ ಗೌಡ ಸೇರಿ 39 ಮಂದಿಯ ವಿರುದ್ಧ ಪ್ರಕರಣ ಬಲವಾಗಿದ್ದು, ಬಿಜೆಪಿ ನಾಯಕ ಪ್ರೀತಂ ಗೌಡ ಹಾಗೂ ಇತರ ರಾಜಕೀಯ ಸಂಪರ್ಕಗಳು ಪ್ರಕರಣಕ್ಕೆ ಮತ್ತಷ್ಟು ತೂಕ ತಂದಿವೆ.
ಮಹಿಳೆಯರ ಸಮ್ಮತಿಯಿಲ್ಲದೆ ವಿಡಿಯೋ ಚಿತ್ರೀಕರಿಸಿ ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಿರುವ ಆರೋಪಗಳು ದೃಢಪಟ್ಟಿವೆ ಎಂದು SIT ಹೇಳಿದೆ.
ಆದರೆ ಇಡೀ ಪ್ರಕರಣದಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿ ಎಂದರೆ, ಪ್ರಜ್ವಲ್ ರೇವಣ್ಣ ಅವರ ಹೆಸರು ಈ ಚಾರ್ಜ್‌ಶೀಟ್‌ನಲ್ಲಿ ಕಾಣಿಸದಿರುವುದು.
ಇದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮುಂದಿನ ನ್ಯಾಯಾಂಗ ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.



