‘ಅಕಿರ’, ‘ವಾಸು ನಾನ್ ಪಕ್ಕಾ ಕಮರ್ಶಿಯಲ್’, ‘ಆರಾಮ್ ಅರವಿಂದ ಸ್ವಾಮಿ’ ಚಿತ್ರಗಳಲ್ಲಿ ಮಿಂಚಿದ ಅನೀಶ್ ತೇಜೇಶ್ವರ್ ಅಭಿನಯದ ಹೊಸ ಸಿನಿಮಾ ‘ಲವ್ OTP’ ನವೆಂಬರ್ 14ರಂದು ಬಿಡುಗಡೆಯಾಗಿದೆ. ಉತ್ತಮ ವಿಮರ್ಶೆಗಳು ಲಭಿಸಿದರೂ, ಪ್ರೇಕ್ಷಕರು ಥಿಯೇಟರ್‌ಗಳಿಗೆ ತೀರಾ ಕಡಿಮೆ ಸಂಖ್ಯೆಯಲ್ಲಿ ಬರುತ್ತಿರುವುದು ನಟನಿಗೆ ಬೇಸರ ತರಿಸಿದೆ. ಈ ಬಗ್ಗೆ ಅನೀಶ್ ಕಣ್ಣೀರಿಡುತ್ತ ವಿಡಿಯೋ ಮಾಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಾಗೂ ವಿಡಿಯೋ ಹಂಚಿಕೊಂಡಿರುವ ಅನೀಶ್ ತೇಜೇಶ್ವರ್, “14 ವರ್ಷಗಳಿಂದ ಹೋರಾಟ. ‘ಲವ್ OTP’ಗೆ ನನ್ನ ವೃತ್ತಿಜೀವನದ ಅತ್ಯುತ್ತಮ ವಿಮರ್ಶೆಗಳು ಸಿಕ್ಕಿವೆ. ಆದರೂ ಯಾಕೆ ಥಿಯೇಟರ್‌ಗೆ ಜನ ಬರುತ್ತಿಲ್ಲ? ಇನ್ನೇನು ಮಾಡಬೇಕೋ ಗೊತ್ತಾಗುತ್ತಿಲ್ಲ. ಇವತ್ತು–ನಾಳೆ ಪ್ರೇಕ್ಷಕರು ಕೈ ಹಿಡಿದರೆ ಮುಂದೆ ನಡೆಯುತ್ತೇನೆ, ಇಲ್ಲದಿದ್ದರೆ ಇಲ್ಲಿ ನನ್ನ ಸಿನಿಮಾ ಪ್ರಯತ್ನ ನಿಲ್ಲುತ್ತೆ,” ಎಂದು ಭಾವುಕರಾಗಿದ್ದಾರೆ..
“ಬೆಳಗ್ಗೆ ಕಲೆಕ್ಷನ್ ನೋಡಿ ಬೇಸರವಾಯಿತು. ಅನೀಶ್ ಫಿಲ್ಮ್ ಇಂಡಸ್ಟ್ರಿಯಲ್ಲಿ ‘ವರ್ಥ್’ ಇದೆಯಾ ಎನ್ನುವ ಪ್ರಶ್ನೆ ಮೂಡಿದೆ. ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೆ ಎಲ್ಲವನ್ನೂ ನಾನೇ ಮಾಡುತ್ತೇನೆ. ಪ್ರೇಕ್ಷಕರು ಕೈ ಹಿಡಿಯದಿದ್ದರೆ ಇದು ನನ್ನ ಕೊನೆಯ ಪ್ರಯತ್ನವಾಗಬಹುದೇನೋ ಎಂದು ಕಣ್ಣೀರು ಹಾಕಿದ್ದಾರೆ.
ಉತ್ತಮ ವಿಮರ್ಶೆ ಸಿಕ್ಕಿದ್ದರೂ, ಪ್ರೇಕ್ಷಕರ ಬೆಂಬಲದ ಕೊರತೆಯಿಂದ ಅನೀಶ್ ತೇಜೇಶ್ವರ್ ಸ್ಪಷ್ಟವಾಗಿ ಮನನೊಂದು ಮಾತನಾಡಿರುವುದು ಅವರ ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ.



