ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಮುಚ್ಚಿಹಾಕಲು ಜನರೇ ಗುಂಡಿ ತೆಗೆಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ಧಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರವಾಹದ ಸ್ಥಳಗಳಲ್ಲಿ ಸೆನ್ಸರ್ ಅಳವಡಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ ಯಾವ ಕೆಲಸವೂ ಆಗಿಲ್ಲ. ಏ. 15ರಂದೇ ಹವಾಮಾನ ಇಲಾಖೆ ಮಳೆ ಜೋರಾಗಲಿದೆ ಎಂದು ಸೂಚನೆ ನೀಡಿತ್ತು.
ಒಂದು ತಿಂಗಳ ಸಮಯದಲ್ಲಿ ಬಿಬಿಎಂಪಿಯಿಂದ ಮುಂಜಾಗ್ರತಾ ಸಭೆ ನಡೆಸಿಲ್ಲ. ಸಮಾವೇಶಕ್ಕೆ ಮಾತ್ರ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಂಡರು. 14 ಸಾವಿರ ಗುಂಡಿ ಮುಚ್ಚಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈಗ ಕಾಂಗ್ರೆಸ್ ಪಕ್ಷವನ್ನು ಮುಚ್ಚಿಹಾಕಲು ಜನರೇ ಗುಂಡಿ ತೆಗೆಯುತ್ತಿದ್ದಾರೆ ಎಂದರು.
ಇಡೀ ಬೆಂಗಳೂರು ಮಳೆಯಿಂದಾಗಿ ಮುಳುಗುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ 5 ಜನರು ಸತ್ತಿದ್ದಾರೆ. ಇಂಥವರ ಸಾವಿನ ಮೇಲೆ ಕಾಂಗ್ರೆಸ್ ಸಾಧನೆಯ ಸಮಾವೇಶ ಮಾಡುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನು ರದ್ದು ಮಾಡಬೇಕಿತ್ತು ಎಂದು ಕಿಡಿಕಾರಿದ್ದಾರೆ.