ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಕೇಸ್ ಹೆಚ್ಚಾಗುತ್ತಿದ್ದು, ಈ ಮಧ್ಯೆಯೇ ನಗರದಲ್ಲಿ ಸೋಂಕು ಪರೀಕ್ಷೆ ನೆಪದಲ್ಲಿ ಲ್ಯಾಬ್ ಗಳು ವಸೂಲಿಗಿಳಿದಿದೆ.
ಹೌದು, ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಒಂದೆಡೆಯಾದರೆ ಸೋಂಕು ಪರೀಕ್ಷೆ ನೆಪದಲ್ಲಿ ಸುಲಿಗೆ ಮಾಡುತ್ತಿರುವುದು ಮತ್ತೊಂದೆಡೆ ಆಗಿದೆ.
ನಗರ ಆರೋಗ್ಯ ಕೇಂದ್ರಗಳು ಶಿಫಾರಸು ಮಾಡಿದ ದರಕ್ಕಿಂತ 3 ರಿಂದ 15 ಪಟ್ಟು ಹೆಚ್ಚು ವಸೂಲಿ ಮಾಡುತ್ತಿರುವುದನ್ನು ಮುಂದುವರೆಸಿವೆ ಎಂಬ ಆರೋಪಗಳು ಕೇಳಿಬಂದಿವೆ.
ದರಗಳನ್ನು ಮಿತಿಗೊಳಿಸಿದ ಒಂದು ತಿಂಗಳ ನಂತರ, ಪ್ರಸ್ತುತ ಡೆಂಗ್ಯೂ ಪರೀಕ್ಷೆಗೆ ವಿಧಿಸುತ್ತಿರುವ ದರಗಳನ್ನು ಖಚಿತಪಡಿಸಿಕೊಳ್ಳಲು ಡಯಾಗ್ನೋಸ್ಟಿಕ್, ವೈದ್ಯಕೀಯ ಕೇಂದ್ರಗಳು ಮತ್ತು ಆಸ್ಪತ್ರೆಗಳು ಸೇರಿದಂತೆ 25 ಸ್ಥಳಗಳನ್ನು ಸಂಪರ್ಕಿಸಲಾಯಿತು. ಕಮ್ಮನಹಳ್ಳಿ, ಕಸ್ತೂರಿ ನಗರ, ಇಂದಿರಾನಗರ, ವಿಲ್ಸನ್ ಗಾರ್ಡನ್, ರಾಜಾಜಿನಗರ, ಜಯನಗರ, ನಾಗರಭಾವಿ, ಸಂಪಂಗಿರಾಮ್ ನಗರ, ಕುಮಾರಸ್ವಾಮಿ ಲೇಔಟ್, ಆರ್‌ಟಿ ನಗರ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿನ ಕೇಂದ್ರಗಳಿಗೆ ಕರೆ ಮಾಡಿ ದರಗಳನ್ನು ವಿಚಾರಿಸಲಾಗಿತ್ತು. ಈ ವೇಳೆ ಹೆಚ್ಚು ದರ ವಸೂಲಿ ಮಾಡುತ್ತಿರುವುದು ಗೊತ್ತಾಗಿದೆ.
25 ವೈದ್ಯಕೀಯ ಸಂಸ್ಥೆಗಳ ಪೈಕಿ 12 ರಲ್ಲಿ ರ‍್ಯಾಪಿಡ್ ವಿಧಾನದ ಪರೀಕ್ಷೆಗೆ 250 ರೂ. ಮತ್ತು 4 ಕೇಂದ್ರಗಳು ಎಲಿಸಾ ವಿಧಾನದ ಪರೀಕ್ಷೆಗೆ 300 ರೂ. ವಿಧಿಸುತ್ತಿರುವುದು ತಿಳಿದುಬಂದಿದೆ. ಉಳಿದ ಕೇಂದ್ರಗಳು ರ‍್ಯಾಪಿಡ್ ವಿಧಾನಕ್ಕೆ 600 ರಿಂದ 1,250 ರೂ.ವರೆಗೆ ಶುಲ್ಕ ವಿಧಿಸುತ್ತಿದ್ದರೆ, ಎಲಿಸಾ ಪರೀಕ್ಷೆಗೆ 900 ರಿಂದ 4,750 ರೂ. ವಿಧಿಸುತ್ತಿವೆ ಎಂದು ವರದಿ ತಿಳಿಸಿದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಐಟಿಪಿಎಲ್ ರಸ್ತೆಯಲ್ಲಿರುವ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ರ‍್ಯಾಪಿಡ್ ಪರೀಕ್ಷೆಗೆ 1,250 ರೂ. ಮತ್ತು ಎಲಿಸಾ ವಿಧಾನಕ್ಕೆ 4,750 ರೂ. (ಕ್ಯಾಪ್ಡ್ ದರಕ್ಕಿಂತ 15 ಪಟ್ಟು) ಶುಲ್ಕ ವಿಧಿಸಲಾಗುತ್ತಿದೆ. ವಿಲ್ಸನ್ ಗಾರ್ಡನ್‌ನಲ್ಲಿರುವ ಮತ್ತೊಂದು ಆಸ್ಪತ್ರೆಯಲ್ಲಿ ರ‍್ಯಾಪಿಡ್ ಪರೀಕ್ಷೆಗೆ 720 ರೂ. ವಿಧಿಸಲಾಗುತ್ತಿದೆ.