ಶಿವಮೊಗ್ಗ:- ನೋಡಿ ಮರ್ರೆ.. ಈ ಪುಡಿರೌಡಿಗಳಿಗೆ ಯಾವ ಪೊಲೀಸರ ಭಯವೂ ಇಲ್ಲ, ಕಾನೂನು ಭಯವೂ ಇಲ್ಲ. ನಾವು ಮಾಡಿದ್ದೇ ಸರಿ. ನಾವು ಇರೋದು ಹೀಗೆ ಸ್ವಾಮಿ ಎನ್ನುತ್ತಾ ಲಾಂಗ್ ಗೆ ದೇವಸ್ಥಾನದಲ್ಲಿ ಪೂಜೆ ಮಾಡಿಸ್ತಾರೆ, ಹಾಡುಹಗಲೇ ನಡು ರಸ್ತೆಯಲ್ಲಿ ರೌಡಿಸಂ ಮಾಡ್ತಾರೆ, ಅಲ್ಲದೇ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ.. ಇವೆಲ್ಲಾ ದೃಶ್ಯ ಕಂಡು ಬಂದಿರೋದು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ…
ಮೊದಲಿಗೆ ರೌಡಿ ಶೀಟರ್ ನಿಂದ ಫೈರಿಂಗ್:-
ಶಿವಮೊಗ್ಗದ ಟಿಪ್ಪು ನಗರದ ಬಡಾವಣೆಯಲ್ಲಿ ಮಹ್ಮದ್ ಇರ್ಫಾನ್ ಎಂಬ ರೌಡಿಶೀಟರ್ ರಾತ್ರಿಹೊತ್ತಿನಲ್ಲಿ ಗನ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಮೂಡಿಸಿದ್ದ. ಆದರೆ ಇಲ್ಲಿ ರೌಡಿಶೀಟರ್ ಕೈಗೆ ಗನ್ ಬಂದಿದ್ದು ಹೇಗೆ ಎನ್ನುವುದು ಮಾತ್ರ ನಿಗೂಢ. ಟಿಪ್ಪು ನಗರದ ಜನರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದರು. ಆದರ ಘಟನೆ ಕುರಿತು ಮಾಹಿತಿ ನೀಡಲು ಹಿಂದೇಟು ಹಾಕಿದ್ದರು. ಇನ್ನೂ ಫೈರಿಂಗ್ ಬೆನ್ನಲ್ಲೇ ಎಚ್ಚೆತ್ತುಕೊಂಡ ತುಂಗಾ ನಗರ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ರೌಡಿಶೀಟರ್ ನನ್ನು ಬಂಧಿಸಿದ್ದಾರೆ. ಅಸಲಿಗೆ ಮೂರು ದಿನಗಳ ಹಿಂದೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಯಾವ ಗನ್ ಎನ್ನುವುದು ಮಾತ್ರ ನಿಗೂಢವಾಗಿದೆ.
ಹಾಡುಹಗಲೇ ಮಚ್ಚಿನಿಂದ ದಾಳಿ:-
ಭದ್ರಾವತಿಯ ಮುಖ್ಯ ರಸ್ತೆಯಲ್ಲಿ ಪ್ರಮೋದ್ ಅಲಿಯಾಸ್ ಗಾಂಧಿ ರೌಡಿ ಗ್ಯಾಂಗ್ ಅಟ್ಟಾಡಿಸಿಕೊಂಡು ರೌಡಿ ಶೀಟರ್ ವಿಶ್ವ ಅಲಿಯಾಸ್ ಮುದ್ದೆ ಮೇಲೆ ಮಚ್ಚು, ಲಾಂಗ್ನಿಂದ ಅಟ್ಯಾಕ್ ಮಾಡಿತ್ತು. ಆದರೆ ಅದೃಷ್ಟ ಚೆನ್ನಾಗಿತ್ತು. ದಾಳಿಯಲ್ಲಿ ವಿಶ್ವ ಜಸ್ಟ್ ಮಿಸ್ ಆಗಿದ್ದ. ವಿಶ್ವ ಮೇಲೆ ರೌಡಿ ಗ್ಯಾಂಗ್ ಅಟ್ಯಾಕ್ ಮಾಡಲು ಕಾರಣ ಅಂದರೆ ಪ್ರಮೋದ್ ಅಲಿಯಾಸ್ ಗಾಂಧಿ ಎನ್ನುವ ರೌಡಿಶೀಟರ್ ಮೇಲೆ ರೌಡಿ ವಿಶ್ವ, ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದ. ಈ ಸೇಡು ತೀರಿಸಿಕೊಳ್ಳಲು ಪ್ರಮೋದ್ ಹಾಡುಹಗಲೇ ಮಚ್ಚಿನಿಂದ ವಿಶ್ವನ ಮೇಲೆ ದಾಳಿಗೆ ಯತ್ನಿಸಿದ್ದ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಪ್ರತೀಕಾರ ತೀರಿಸಿಕೊಳ್ಳಲು ಮಚ್ಚಿಗೆ ಪೂಜೆ:-
ರೌಡಿಗಳು ಓಪನ್ ಆಗಿ ಹಾಡುಹಗಲೇ ಬೀದಿಯಲ್ಲಿ ಗಲಾಟೆ ಮಾಡಿಕೊಂಡಿದ್ದರು. ಭದ್ರಾವತಿಯ ಹಳೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲು ಆಗಿತ್ತು. ಇನ್ನೂ ಭದ್ರಾವತಿಯ ನಗರದ ದೇವಸ್ಥಾನ ಒಂದರಲ್ಲಿ ರೌಡಿಶೀಟರ್ ವಿಶ್ವನು ದೇವಸ್ಥಾನದಲ್ಲಿ ಮಚ್ಚನ್ನು ಅರ್ಚಕರಿಂದ ಪೂಜೆ ಮಾಡಿಸಿದ್ದ. ಈ ಮೂಲಕ ರೌಡಿ ಗಾಂಧಿ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ಶಪಥ ಮಾಡಿದ್ದನಂತೆ. ಈ ಘಟನೆಗಳು ಭದ್ರಾವತಿ ನಗರದ ಜನರನ್ನು ಬೆಚ್ಚಿಬೀಳಿಸಿವೆ.