ಬೆಂಗಳೂರು: ಕಸ ವಿಲೇವಾರಿ ವಿಚಾರದಲ್ಲಿ ಬಿಜೆಪಿ ನಾಯಕರು ಅಡ್ಡಿಪಡಿಸಿದರೆ ಜನರೇ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಅಸ್ಸಾಂಗೆ ತೆರಳುವ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಬಿಜೆಪಿ ನಾಯಕರು ಕಸ ವಿಲೇವಾರಿಗೆ ಬಿಡುವುದಿಲ್ಲ ಎಂದು ಹೇಳುತ್ತಾರೆ. ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಲೇಬೇಕಲ್ಲವೇ? ಅದು ಜನರ ಕಸ. ಮೊದಲಿನಿಂದಲೂ ಹೇಗೆ ವ್ಯವಸ್ಥೆ ಇತ್ತೋ, ಅದೇ ರೀತಿ ಮುಂದುವರಿಸುತ್ತಿದ್ದೇವೆ. ಬಿಜೆಪಿ ಹಾಗೂ ನಮ್ಮ ಆಡಳಿತಾವಧಿಯಲ್ಲೂ ಇದೇ ರೀತಿಯ ತೀರ್ಮಾನ ಕೈಗೊಳ್ಳಲಾಗಿತ್ತು” ಎಂದು ಸ್ಪಷ್ಟಪಡಿಸಿದರು.
ಯಾರು ಕಸ ಬಿಡುವುದಿಲ್ಲವೋ, ಅಂಥವರ ಕ್ಷೇತ್ರದಲ್ಲಿ ಕಸವನ್ನು ತೆಗೆಯುವುದೇ ಇಲ್ಲ, ತೆಗೆಸುವುದೇ ಇಲ್ಲ. ಆಗ ಜನರೇ ಅವರಿಗೆ ಪ್ರಶ್ನೆ ಕೇಳುತ್ತಾರೆ. ಅಗತ್ಯವಿದ್ದರೆ ಮೈಕ್ ಹಾಕಿ ಪ್ರಚಾರ ಮಾಡಿಸುತ್ತೇನೆ. ಅಭಿವೃದ್ಧಿಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
20, 30 ಕೋಟಿ ಸೇರಿದಂತೆ 50 ರಿಂದ 100 ಕೋಟಿ ರೂಪಾಯಿವರೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡುತ್ತಿದ್ದೇವೆ. ನಾವು ನೀಡುತ್ತಿರುವ ಸಹಾಯವನ್ನು ಅವರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು. ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,
ಅಲ್ಲಿ ಮೂರು ದಿನ ಕಸವನ್ನು ತೆಗೆಯದೇ ಇದ್ದರೆ ಪರಿಸ್ಥಿತಿ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಸ ವಿಲೇವಾರಿಗೆ ನಾಲ್ಕು ಕಡೆ ಜಾಗಗಳನ್ನು ಪರಿಶೀಲಿಸಿದ್ದೆವು. ಭೂಮಿ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಎರಡು ಕಡೆ ಅಂತಿಮಗೊಳಿಸಿದ್ದೇವೆ. ಟೆಂಡರ್ ಕೂಡ ಕರೆಯಲಾಗಿದೆ. ಸರ್ಕಾರ ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದೆ” ಎಂದು ತಿಳಿಸಿದರು.



