ಬೆಂಗಳೂರು: ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಜಾಹಿರಾತುಗಳ ವಿರುದ್ಧ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ಅಂಟಿಸಿದ್ದ ತಂಬಾಕು ಜಾಹಿರಾತು ಪೋಸ್ಟರ್‌ಗಳನ್ನು ಕನ್ನಡ ಸಂಘಟನೆಗಳ ಕಾರ್ಯಕರ್ತರು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಆರಂಭವಾದ ಈ ಚಳವಳಿ ಇದೀಗ ರಾಜಧಾನಿ ಬೆಂಗಳೂರುಗೂ ವಿಸ್ತರಿಸಿದೆ.
ಮೆಜೆಸ್ಟಿಕ್ ಹಾಗೂ ಕೆಆರ್ ಪುರಂ ಬಸ್ ನಿಲ್ದಾಣಗಳಲ್ಲಿ ಕಾರ್ಯಕರ್ತರು ಬಸ್‌ಗಳ ಮೇಲಿನ ವಿಮಲ್, ಆರ್‌ಎಂಡಿ ಸೇರಿದಂತೆ ವಿವಿಧ ಗುಟ್ಕಾ ಉತ್ಪನ್ನಗಳ ಜಾಹಿರಾತು ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ. ರೂಪೇಶ್ ರಾಜಣ್ಣ ನೇತೃತ್ವದ ಯುವ ಕರ್ನಾಟಕ ತಂಡದ ಸದಸ್ಯರು ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ, ಸ್ಟಿಕ್ಕರ್ ಹಾಗೂ ಪೋಸ್ಟರ್‌ಗಳನ್ನು ತೆರವುಗೊಳಿಸಿದರು. ಈ ವೇಳೆ ಸಾರ್ವಜನಿಕರಿಂದ ಸಹ ಬೆಂಬಲ ವ್ಯಕ್ತವಾಗಿದೆ.
ಕಾರ್ಯಕರ್ತರು ಮಾತನಾಡಿ, “ತಕ್ಷಣವೇ ಎಲ್ಲಾ ಬಸ್‌ಗಳಿಂದ ತಂಬಾಕು ಜಾಹಿರಾತುಗಳನ್ನು ತೆಗೆಯಬೇಕು. ಇಲ್ಲದಿದ್ದರೆ ಬಸ್‌ಗಳನ್ನು ನಿಲ್ಲಿಸಿ ಮಸಿ ಬಳಿಯುವ ಮೂಲಕ ಹೋರಾಟ ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ವರ್ಷದಲ್ಲಿ ಬಿಎಂಟಿಸಿ ಬಸ್ ಜಾಹಿರಾತುಗಳಿಂದ ಸುಮಾರು 60 ಕೋಟಿ ರೂ ಆದಾಯ ಬರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು “ಕೇಂದ್ರ ಸರ್ಕಾರವೇ ತಂಬಾಕು ನಿಷೇಧ ಮಾಡಬೇಕು” ಎಂದು ಹೇಳಿಕೆ ನೀಡಿರುವುದಕ್ಕೆ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. “ಆದಾಯಕ್ಕಿಂತ ಜನರ ಆರೋಗ್ಯ ಮುಖ್ಯ. ಸರ್ಕಾರ ಮೊಂಡುತನ ತೋರಿಸಬಾರದು” ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ–ಧಾರವಾಡದಲ್ಲಿ ಆರಂಭವಾದ ಗುಟ್ಕಾ ವಿರೋಧಿ ಚಳವಳಿ ಇದೀಗ ರಾಜ್ಯಾದ್ಯಂತ ವ್ಯಾಪಿಸುತ್ತಿದ್ದು, ಸಂಘಟನೆಗಳ ಜೊತೆಗೆ ಸಾಮಾನ್ಯ ನಾಗರಿಕರೂ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



