ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿ ಸಂಚಾರವೇ ದುಸ್ತರವಾಗಿದೆ. ಇನ್ನು 15 ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ಗುಂಡಿ ಮುಚ್ಚುವ ಕಾರ್ಯ ಆರಂಭವಾಗದೇ ಇದ್ದರೆ ಜನಾಂದೋಲನ ಕೈಕೊಳ್ಳುವುದಾಗಿ ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಸ್ತೆಗಳ ಗುಂಡಿ ಸಮಸ್ಯೆ ಇಂದು-ನಿನ್ನೆಯದಲ್ಲ. ಸುದೀರ್ಘ ಸಮಯದಿಂದ ಗದಗ-ಬೆಟಗೇರಿ ನಾಗರಿಕರು ಈ ಅವ್ಯವಸ್ಥೆಯನ್ನು ಅನುಭವಿಸುತ್ತಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದ ಯಾವೊಂದು ಮುಖ್ಯರಸ್ತೆಯೂ ಗುಂಡಿಗಳಿಂದ ಮುಕ್ತವಾಗಿಲ್ಲ. ವಾಹನ ಚಲಾಯಿಸಲು ಅಡಚಣೆ ಉಂಟಾಗಿ ದಿನಕ್ಕೊಂದು ಕಡೆ ಅಪಘಾತ ಸಂಭವಿಸಿ ವಾಹನ ಸವಾರರು ಗಾಯಗೊಳ್ಳುತ್ತಿದ್ದಾರೆ.
ಮಳೆಗಾಲವಾಗಿರುವುದರಿಂದ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರಿರಲಿ, ಪಾದಚಾರಿಗಳೇ ಸಂಕಷ್ಟ ಅನುಭವಿಸುವಂತಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಗುಂಡಿ ಮುಚ್ಚುವ ಕಾರ್ಯ ಮಾಡದಿದ್ದರೆ ಜನರಿಂದ ದೇಣಿಗೆ ಸಂಗ್ರಹಿಸಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.