ತೀರ್ಥಹಳ್ಳಿ;- ಸ್ಪೀಕರ್ ಆದವರು ಹೆಚ್ಚು ಮಾತನಾಡದೇ ಪ್ರತಿಪಕ್ಷದ ಸ್ನೇಹಿತರಂತೆ ಕಾರ್ಯನಿರ್ವಹಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಆಗುಂಬೆ ಸಮೀಪದ ಹಸಿರುಮನೆ ಗ್ರಾಮದ ತಾಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಮಹಾಬಲೇಶ್ ಮನೆ ಆವರಣದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನವೇ ನಮ್ಮ ಪಕ್ಷ ಮತ್ತು ಧರ್ಮವಾಗಿದ್ದು, ಅದಕ್ಕೆ ನಿಷ್ಠರಾಗಿ ಶಿಷ್ಠಾಚಾರಕ್ಕೆ ಅಪಚಾರವಾಗದಂತೆ ಕಾರ್ಯನಿರ್ವಹಿಸುವ ಬದ್ಧತೆ ನಮ್ಮ ಮೇಲಿದೆ. ಆಡಳಿತವನ್ನು ಎಚ್ಚರಿಸುವ ಸಲುವಾಗಿ ವಿರೋಧ ಪಕ್ಷದವರಿಗೆ ಹೆಚ್ಚಿನ ಅವಕಾಶವನ್ನೂ ಕಲ್ಪಿಸಬೇಕಾಗುತ್ತದೆ ಎಂದರು.
ಇನ್ನೂ ವಿಧ್ಯಾರ್ಥಿಗಳ ಕೊರತೆಯಿಂದ ಬಡವಿದ್ಯಾರ್ಥಿಗಳು ಓದುವ ಸರ್ಕಾರಿ ಶಾಲೆಗಳು ಸೊರಗದಂತೆ ಅಭಿವೃದ್ಧಿಪಡಿಸಲು ಎಸ್‍ಡಿಎಂಸಿ ಹಾಗೂ ಸಾರ್ವಜನಿಕರ ಸಹಭಾಗಿತ್ವ ಅನಿವಾರ್ಯವಾಗಿದೆ. ಶೈಕ್ಷಣಿಕ ಅಭಿವೃದ್ದಿಯಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ ಎಂದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ತಾಲೂಕಿನ ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಸಾರ್ವಜನಿಕರ ಸಹಕಾರದಿಂದ ಶಾಲೆಯೊಂದು ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಗುಡ್ಡೇಕೇರಿಯ ಈ ಶಾಲೆ ಮಾದರಿಯಾಗಿದೆ ಎಂದರು.