ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೆಂಗಳೂರಿನ ವಿಧಾನಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಪೂರ್ವ ಅಧಿವೇಶನದಲ್ಲಿ ಬುಧವಾರ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲವಾದ್ದರಿಂದ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯಡಿಯಲ್ಲಿ ಮಾತನಾಡಿದ ಶಾಸಕರು, 2018-19ನೇ ಸಾಲಿಗೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಸರ್ಕಾರಿ ಸಾಂಸ್ಥಿಕ ಕೋಟಾದಡಿ ನಿಗದಿಪಡಿಸಿದ ಕೋಟಾ ಪೂರ್ಣಗೊಳಿಸಿಲ್ಲ. ತಾಂಡಾ ಅಭಿವೃದ್ಧಿ, ಅಂಬೇಡ್ಕರ್ ನಿಗಮದ ರೈತ ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆಯಲು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಂಬೇಡ್ಕರ್, ತಾಂಡಾ, ಹಟ್ಟಿಗಳಲ್ಲಿರುವ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸ್ಥಾಪಿಸಿದ ಅಭಿವೃದ್ಧಿ ನಿಗಮಗಳ ಸ್ಕೀಮ್ಗಳು ಹೆಸರಿಗೆ ಮಾತ್ರ ಎನ್ನುವಂತಾಗಿವೆ.
ಉಪಸಭಾಧ್ಯಕ್ಷರೂ ಆದ ನೀವೂ(ರುದ್ರಪ್ಪ ಲಮಾಣಿ) ಸಹ ತಾಂಡಾ ನಿಗಮಕ್ಕೆ ಬರುವವರು. ಈ ಸರ್ಕಾರದಲ್ಲಿ ನೀವೆಷ್ಟು ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ಮಾಡಿದ್ದೀರಿ ಎಂದು ವಿಧಾನಸಭಾ ಉಪಾಧ್ಯಕ್ಷರನ್ನು ಪ್ರಶ್ನಿಸಿದರು. ಕೊಳವೆಬಾವಿಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ನೂರಾರು ಅರ್ಜಿಗಳು ಬರುತ್ತವೆ. ಆದರೆ ಸರಕಾರ ನೀಡುತ್ತಿರುವದು ಬೆರಳೆಣಿಕೆಯಷ್ಟು. ಇದರಿಂದ ನಾನಷ್ಟೇ ಅಲ್ಲದೇ ರಾಜ್ಯದ ಎಲ್ಲ ಶಾಸಕರು ರೈತರು ಕೇಳುವ ಪ್ರಶ್ನೆಗಳಿಗೆ ಉತ್ತರಿಸದಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಶಾಸಕ ಡಾ.ಚಂದ್ರು ಲಮಾಣಿ ಅವರ ಪ್ರಶ್ನೆಗೆ ಧ್ವನಿಗೂಡಿಸಿದ ಸದನದ ಹಲವು ಶಾಸಕರು ಪ್ರಸ್ತುತ ತಾಲೂಕುಗಳಲ್ಲಿ ನಿಗಮಗಳಿಂದ ನೀಡುತ್ತಿರುವ ಗುರಿಗಳು/ಅನುದಾನ ಸಾಕಾಗುತ್ತಿಲ್ಲ. ಕಾರಣ ಗುರಿಗಳನ್ನು ಹೆಚ್ಚಿಸಿ ಪ್ರತಿ ತಾಲೂಕುಗಳಿಗೆ ಹೆಚ್ಚಿನ ಅನದಾನ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಕೊಳವೆ ಬಾವಿಗಳನ್ನು ಕೊರೆಯುವ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರವೇ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.



