ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಸಿಗದೆ ರೈತರು ತೊಂದರೆ ಅನುಭವಿಸುತ್ತಿದ್ದು, ರಾಜ್ಯ ಸರಕಾರ ರೈತರ ಜೀವನದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು ಸಮರ್ಪಕವಾಗಿ ಗೊಬ್ಬರ ಪೂರೈಸಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿದರು.
ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೂರ ಮಾತನಾಡಿ, ರಾಜ್ಯಕ್ಕೆ ಅಗತ್ಯವಿರುವ ಯೂರಿಯಾ ಗೊಬ್ಬರವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ರೈತರಿಗೆ ಗೊಬ್ಬರವನ್ನು ವಿತತರಣೆ ಮಾಡದೆ ಅನ್ಯಾಯ ಮಾಡುತ್ತಿರುವುದು ಖಂಡನೀಯ. ಅಲ್ಲದೆ ರಾಜ್ಯ ಸರಕಾರ ಇಟ್ಟಿದ್ದ ಬೇಡಿಕೆಗಿಂತ ಹೆಚ್ಚು ಗೊಬ್ಬರವನ್ನು ಕೇಂದ್ರ ಸರಕಾರ ನೀಡಿದೆ. ಆದರೂ ರಾಜ್ಯ ಸರಕಾರ ರೈತರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿರುವುದು ನಾಚಿಕೆ ತರುವ ಸಂಗತಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಮುತ್ತಣ್ಣ ಕಡಗದ ಮಾತನಾಡಿ, ರಾಜ್ಯ ಸರಕಾರ ಸೇರಿದಂತೆ ಸ್ಥಳೀಯ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಗೊಬ್ಬರ ಪೂರೈಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸಬಾರದು. ಜಮೀನುಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಸಂದರ್ಭಕ್ಕೆ ತಕ್ಕಂತೆ ಗೊಬ್ಬರ ಪೂರೈಸಿದರೆ ಮಾತ್ರ ರೈತರಿಗೆ ಉತ್ತಮ ಫಸಲು ಸಿಗುತ್ತದೆ. ಇಲ್ಲದಿದ್ದರೆ ಮತಕ್ಷೇತ್ರದ ರೈತರು ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಅರಿಯಬೇಕು ಎಮದರು.
ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಸೂಡಿ ಕ್ರಾಸ್ ಮೂಲಕ ಮುಲ್ಲಾನಭಾವಿ, ಪೋತರಾಜನ ಕಟ್ಟೆ ಮೂಲಕ ಕೃಷಿ ಇಲಾಖೆ ತಲುಪಿತು. ಸೂಡಿ ವೃತ್ತ, ಮುಲ್ಲಾನಭಾವಿ ವೃತ್ತದ ಬಳಿ ಪಕ್ಷದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಅವರು ಕೃಷಿ ಇಲಾಖೆಗೆ ತೆರಳಿ ಮನವಿ ಸಲ್ಲಿಸಿದರು.
ಬಿಜೆಪಿ ಮುಖಂಡ ರವಿ ದಂಡಿನ, ತಾ.ಪಂ ಮಾಜಿ ಉಪಾಧ್ಯಕ್ಷೆ ಇಂದಿರಾ ತೇಲಿ, ಲಲಿತಾ ಮಾರನಬಸರಿ, ತಾ.ಪಂ ಮಾಜಿ ಸದಸ್ಯ ಆರ್.ಕೆ. ಚವ್ಹಾಣ, ಶರಣಯ್ಯ ಹಿರೇಮಠ, ಚಂದ್ರು ಮಾರನಬಸರಿ, ವೀರಣ್ಣ ಮರಡಿ, ಶಿವಕುಮಾರ ದಿಂಡೂರ, ಶರಣಪ್ಪ ಸಂಗಟಿ, ಶರಣಪ್ಪ ತಳವಾರ, ವಿರೂಪಾಕ್ಷ ಅಂಗಡಿ, ಮಲ್ಲು ಮಾದರ, ಪರಸು ಮಾದರ, ಬಸವರಾಜ ಕೊಟಗಿ, ಕುಮಾರ ಪಲ್ಲೇದ, ಶಿವಾನಂದ ಜಿಡ್ಡಿಬಾಗಿಲ, ಬಸವರಾಜ ಕೊಟಗಿ, ರಂಗನಗೌಡ್ರ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹೊಳೆಆಲೂರ, ರೋಣ ಹೊಬಳಿಯ ಕೆಲ ಗ್ರಾಮಗಳಲ್ಲಿ ರೈತರಿಗೆ ದೊರಕಬೇಕಿದ್ದ ಬೆಳೆವಿಮಾ ಹಣವು ನಿರ್ದಿಷ್ಟ ವ್ಯಕ್ತಿಯ ಪಾಲಾಗಿದ್ದು, ಇದನ್ನು ಪ್ರಶ್ನಿಸಿ ದಾಖಲೆಗಳನ್ನು ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ ಅವರು ಬೆಳೆವಿಮಾ ಹಣವನ್ನು ಲೂಟಿ ಮಾಡಿರುವ ವ್ಯಕ್ತಿಯ ಪರವಾಗಿ ನಿಂತು ನಮಗೆ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕೃಷಿ ಅಧಿಕಾರಿ ಎಸ್.ಎಫ್. ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಇದು ಕೃಷಿ ಇಲಾಖೆಯಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷದ ಕಚೇರಿಯಾಗಿದೆ ಎಂದು ಪಕ್ಷದ ಮುಖಂಡ ಮಲ್ಲು ಮಾದರ ತಮ್ಮ ಆಕ್ರೋಶವನ್ನು ಹೊರಹಾಕಿದರು.