ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಾಲಾ ಪ್ರಾರಂಭೋತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಇಂದಿನಿAದಲೇ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಮಾಡಬೇಕಾಗಿರುವ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ್ ಹೇಳಿದರು.
ಅವರು ಗುರುವಾರ ಪಟ್ಟಣದ ಬಿಸಿಎನ್ ಸ್ಪೆಕ್ಟ್ರಮ್ ಶಾಲೆಯ ಸಭಾಂಗಣದಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳ ಸರಕಾರಿ, ಅನುದಾನಿತ, ಅನುದಾನರಹಿತ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಇದೇ ಮೇ 29ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಶಾಲೆ ಆರಂಭಕ್ಕೆ ಅದ್ದೂರಿ ಮತ್ತು ಹೊಸತನದಿಂದ ಮಕ್ಕಳನ್ನು ಸ್ವಾಗತಿಸುವ ಮೂಲಕ 2025-26ನೇ ಶಾಲಾ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಕಾರ್ಯವನ್ನು ಮಾಡೋಣ. ನಮ್ಮ ಶಾಲೆ-ನಮ್ಮ ಜವಾಬ್ದಾರಿ ಎನ್ನುವ ನಿಟ್ಟಿನಲ್ಲಿ ಪ್ರತಿಯೊಂದು ಶಾಲೆಯ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು ಮತ್ತು ಸ್ವಚ್ಛತೆಯ ಬಗ್ಗೆ ಕ್ರಮ ವಹಿಸಬೇಕು. ಈ ಬಾರಿ ಶಾಲಾ ಪ್ರಾರಂಭೋತ್ಸವ ವಿಶೇಷವಾಗಿರಲಿ, ಯುನಿಫಾರ್ಮ್, ಪಠ್ಯ ಪುಸ್ತಕ, ಶೂ ವಿತರಣೆಯಲ್ಲಿ ಕಾಳಜಿ ವಹಿಸಿ. ಶೌಚಾಲಯ ನಿರ್ವಹಣೆಗೆ ಕ್ರಮವಹಿಸಿ. ಅಲಕ್ಷ್ಯ ಮಾಡಿದರೆ ಸಂಬಂಧಿಸಿದವರನ್ನು ಹೊಣೆಗಾರರನ್ನಾಗಿ ಮಾಡಬಹುದಾಗಿದೆ ಎಂದರು.
ಎಸ್‌ಡಿಎಂಸಿ ರಚನೆ ಮಾಡಿ, ಕಲಿಯುತ್ತಿರುವ ಮಕ್ಕಳ ಪಾಲಕರೇ ಕಮಿಟಿಯಲ್ಲಿ ಇರುವಂತೆ ನೋಡಿಕೊಳ್ಳಿ. ಎಲ್ಲವನ್ನು ಸರಿಯಾಗಿ ನಿರ್ವಹಿಸಿ ಎಂದರಲ್ಲದೆ, ಗದಗ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶಿರಹಟ್ಟಿ ಬ್ಲಾಕ್ ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿರುವದಕ್ಕೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳ ಸಹಕಾರವಿದೆ ಎಂದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ನಾಗರಾಜ ಯಂಡಿಗೇರಿ, ತಾಲೂಕು ಪಿಎಮ್ ಪೋಷಣ ಅಭಿಯಾನದ ಸಹ ನಿರ್ದೇಶಕ ಎಚ್.ಎಸ್. ರಾಮನಗೌಡ್ರ, ಬಿಆರ್‌ಪಿ ಈಶ್ವರ ಮೆಡ್ಲೇರಿ, ವಾಸು ದೀಪಾವಳಿ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಮ್.ಎಮ್. ಹವಳದ, ಶಿರಹಟ್ಟಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಕಳಸಾಪೂರ, ಕ.ರಾ.ಸ.ನೌ ಸಂಘದ ನಿರ್ದೇಶಕ ಎಮ್.ಡಿ. ವಾರದ, ಬಿ.ಎಮ್. ಯರಗುಪ್ಪಿ, ಸಿಆರ್‌ಪಿ ಉಮೇಶ್ ನೇಕಾರ, ಸತೀಶ್ ಬೊಮಲೆ, ಆರ್.ಮಹಾಂತೇಶ, ಸಿ.ವಿ. ವಡಕಣ್ಣವರ, ಗಿರೀಶ್ ನೇಕಾರ, ನವೀನ ಅಂಗಡಿ, ಜ್ಯೋತಿ ಗಾಯಕವಾಡ, ಕೆ.ಪಿ. ಕಂಬಳಿ, ಗೀತಾ ಸರ್ವಿ, ಗಾಯತ್ರಿ ಹಳ್ಳದ, ಎಸ್.ಬಿ. ಅಸುಂಡಿ, ಎನ್.ಎನ್. ಸಾವಿರಕುರಿ, ಟಿ.ಎಸ್. ಪೂಜಾರ, ಎಲ್.ಎಫ್. ಮಠದ, ಎನ್.ಎ. ಮುಲ್ಲಾ, ಎಸ್.ಎನ್. ಪಶುಪತಿಹಾಳ ಹಾಗೂ ತಾಲೂಕಿನ ಎಲ್ಲಾ ಶಾಲೆಗಳ ಪ್ರಧಾನ ಗುರುಗಳು ಹಾಜರಿದ್ದರು.
ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲರು ಶಾಲೆಗಳ ಸುಧಾರಣೆ ಬಗ್ಗೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ. ದೆಹಲಿ ಮಾದರಿಯಲ್ಲಿ ಸರಕಾರಿ ಶಾಲೆಗಳ ಸುಧಾರಣೆಗೆ ಕ್ರಮ ವಹಿಸುವ ಬಗ್ಗೆ ಸಚಿವರು ಆಸಕ್ತಿ ಹೊಂದಿದ್ದಾರೆ. ಅಕ್ಷರ ದಾಸೋಹ, ಶಿಷ್ಯ ವೇತನ ಸರಿಯಾಗಿ ಒದಗಿಸುವದು ಕರ್ತವ್ಯವಾಗಿದೆ. ಮಳೆಗಾಲದಲ್ಲಿ ದುರಸ್ತಿ ಆಗಬೇಕಾಗಿರುವ ಕೊಠಡಿಯಲ್ಲಿ ಮಕ್ಕಳನ್ನು ಕೂರಿಸುವದನ್ನು ನಿರ್ಬಂಧಿಸಿ ಇದಕ್ಕೆ ವಿಶೇಷ ಕಾಳಜಿ ತೆಗೆದುಕೊಳ್ಳಿ ಎಂದು ಎಚ್.ಎನ್. ನಾಯ್ಕ್ ಹೇಳಿದರು.



