ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಅಗತ್ಯವೆಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ, ವಿರೋಧ ಪಕ್ಷದ ಮಾಜಿ ನಾಯಕ, ಎಪಿಎಂಸಿ ಮಾಜಿ ಸದಸ್ಯ ಹೇಮಗಿರೀಶ ಗು.ಹಾವಿನಾಳ ಹೇಳಿದರು.
ತಾಲೂಕಿನ ಕಕ್ಕೂರು ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಕಕ್ಕೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಂತಹ ವೇದಿಕೆಗಳು ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಅಣ್ಣಿಗೇರಿ, ಡಯಟ್ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ಮಾತನಾಡಿದರು.
ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣ, ನೃತ್ಯ, ಗಾಯನ ಸೇರಿದಂತೆ ಹಲವಾರು ಸ್ಪರ್ಧೆಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಎಸ್‌ಡಿಎಂಸಿ ಪದಾಧಿಕಾರಿಗಳು, ಶಾಲಾ ಗುರುಗಳು, ಗುರುಮಾತೆಯರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಗುರು-ಹಿರಿಯರು ಇದ್ದರು.



