ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಹಾಗೂ ಸಲೀಂ ಅಹ್ಮದ್ ಅವರ ಅರ್ಜಿಗಳು ಉಪವಿಭಾಗಾಧಿಕಾರಿಗಳಿಂದ ತಿರಸ್ಕೃತವಾಗಿವೆ.
ಸೋಮವಾರ ಈ ಕುರಿತು ಅಧಿಕೃತ ಆದೇಶ ನೀಡಿರುವ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಈ ಹಿಂದೆ ಕಲಬುರಗಿ ಮಹಾನಗರ ಪಾಲಿಕೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಐವರು ಪರಿಷತ್ತಿನ ಸದಸ್ಯರನ್ನು ಮತದಾರರನ್ನಾಗಿ ಮಾಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರು.
ಇದನ್ನು ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಪುರಸ್ಕರಿಸಿದ ಹೈಕೋರ್ಟ್, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡುವ ಉದ್ದೇಶದಿಂದಲೇ ತಮ್ಮ ಮತದಾನದ ಹಕ್ಕು ಬದಲಾವಣೆ ಮಾಡಿಕೊಡಿರುವುದನ್ನು ಮನಗಂಡು ಪರಿಷತ್ ಸದಸ್ಯರ ಅರ್ಜಿಯನ್ನು ತಿರಸ್ಕರಿಸಿತ್ತು.
ಅಂತೆಯೇ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವುದೇ ಸಂದರ್ಭದಲ್ಲಾದರೂ ನಡೆಯಬಹುದು. ಅರ್ಜಿದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದರೆ ಮತದಾನದ ಹಕ್ಕು ಪಡೆಯುವ ಸಾಧ್ಯತೆಯಿದ್ದು, ಈ ಪ್ರಕಣದ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆಯಲ್ಲದೆ, ಈ ಹಿಂದೆಯೂ ಗದಗ ವಿಧಾನಸಭೆ ಮತಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಪ್ರಕರಣ ಧಾರವಾಡ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪ್ರಜಾಪ್ರಾತಿನಿಧ್ಯ ಕಾಯಿದೆ-1950 ಮತ್ತು ರಿಜಿಸ್ಟ್ರೆಷನ್ ಆಫ್ ಎಲೆಕ್ಟ್ರಾಲ್ ರೋಲ್-1960 ಆಂಡ್ ಅಮೆಂಡೆಡ್ ರೂಲ್-2013ರ ಪ್ರಕಾರ ಪರಿಷತ್ ಸದಸ್ಯರು ಸಲ್ಲಿಸಿದ ನಮೂನೆ-8ರ ಸ್ಥಳಾಂತರ ಅರ್ಜಿಯನ್ನು ತಿರಸ್ಕರಿಸಿ ಮತದಾರ ನೋಂದಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಆದೇಶ ಹೊರಡಿಸಿದ್ದಾರೆ.