ನವದೆಹಲಿ: 17ನೇ ಆವೃತ್ತಿಯ ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. ಹೀಗಿರುವಾಗಲೇ ಈ ಪಂದ್ಯ ರದ್ದಾಗಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಈ ವಿಚಾರ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರ ಪೀಠದ ಮುಂದೆ ಬಂದಾಗ, ನ್ಯಾಯಾಲಯವು ಅದನ್ನು ಗಂಭೀರವಾಗಿ ಪರಿಗಣಿಸಲು ನಿರಾಕರಿಸಿತು. ನ್ಯಾಯಮೂರ್ತಿ ಮಹೇಶ್ವರಿ ಸ್ಪಷ್ಟವಾಗಿ ಹೇಳಿದರು, ಆತುರ ಏನಿದೆ? ಇದು ಕೇವಲ ಒಂದು ಪಂದ್ಯ, ನಡೆಯಲಿ ಬಿಡಿ ಎಂದು ಹೇಳಿದ್ದಾರೆ.
ಅರ್ಜಿದಾರರು ಸುಪ್ರೀಂ ಕೋರ್ಟ್ ಬಳಿ ಬೇಗ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ್ದರು. ನ್ಯಾಯಾಲಯದ ಬಳಿ ಪಂದ್ಯ ಭಾನುವಾರ ಇದೆ, ಆದ್ದರಿಂದ ಬೇಗ ವಿಚಾರಣೆ ನಡೆಸಬೇಕು ಎಂದು ಹೇಳಲಾಗಿತ್ತು. ನ್ಯಾಯಮೂರ್ತಿ ಮಹೇಶ್ವರಿ ತಮ್ಮ ಅಭಿಪ್ರಾಯ ತಿಳಿಸಿ ಪಂದ್ಯ ಭಾನುವಾರವಿದ್ದರೆ ನಾವು ಏನು ಮಾಡಬೇಕು, ಪಂದ್ಯ ನಡೆಯಲಿ ಬಿಡಿ ಎಂದು ಹೇಳಿದ್ದಾರೆ.
ಏಷ್ಯಾ ಕಪ್ ಟಿ20 ಲೀಗ್‌ನ ಭಾಗವಾಗಿ ಸೆಪ್ಟೆಂಬರ್ 14, 2025 ರಂದು ದುಬೈನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಲು ತಕ್ಷಣ ನಿರ್ದೇಶನಗಳನ್ನು ಕೋರಿ, ಉರ್ವಶಿ ಜೈನ್ ಸೇರಿದಂತೆ ನಾಲ್ವರು ಕಾನೂನು ವಿದ್ಯಾರ್ಥಿಗಳು ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಈ ಪಿಐಎಲ್ ಅನ್ನು ಸಲ್ಲಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025 ರ ಅನುಷ್ಠಾನಕ್ಕೆ ನಿರ್ದೇಶನಗಳನ್ನು ಸಹ ಕೋರಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತೀಯ ನಾಗರಿಕರು ಮತ್ತು ಸೈನಿಕರು ತಮ್ಮ ಪ್ರಾಣ ತ್ಯಾಗ ಮಾಡಿದ ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವುದು ರಾಷ್ಟ್ರೀಯ ಘನತೆ ಮತ್ತು ಸಾರ್ವಜನಿಕ ಭಾವನೆಗೆ ಅಸಮಂಜಸವಾದ ಸಂದೇಶವನ್ನು ರವಾನಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.