ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಇನ್ನೂ 783 ಸೀಟು ಉಳಿದಿದ್ದು, ಅವುಗಳ ಹಂಚಿಕೆ ಮಾ.11ರಂದು ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಮೂಲಕ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.
ಈ ಸೀಟು ಹಂಚಿಕೆಯನ್ನು ಯಾವುದೇ ಸುತ್ತಿನಲ್ಲಿ ಸೀಟು ಪಡೆಯದ ಅಭ್ಯರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಯಾವ ಕಾಲೇಜಿನಲ್ಲಿ, ಯಾವ ಕೋರ್ಸ್ನಲ್ಲಿ ಎಷ್ಟು ಸೀಟು ಉಳಿದಿವೆ ಮತ್ತು ಅದರ ಶುಲ್ಕವನ್ನು KEA ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ತಮ್ಮ ಆಯ್ಕೆಯ ಕೋರ್ಸ್ನ ಪೂರ್ಣ ಶುಲ್ಕದ ಡಿ.ಡಿ ಅಥವಾ ಚೆಕ್ ಜೊತೆಗೆ ಮಾರ್ಚ್ 11ರಂದು ಮಧ್ಯಾಹ್ನ 3 ಗಂಟೆಯೊಳಗೆ ಮಲ್ಲೇಶ್ವರದ KEA ಕಚೇರಿಗೆ ಸಲ್ಲಿಸಬೇಕು. ಡಿ.ಡಿ/ಚೆಕ್ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮಲ್ಲೇಶ್ವರ, ಬೆಂಗಳೂರು- ಇವರ ಹೆಸರಿನಲ್ಲಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಡಿ.ಡಿ/ಚೆಕ್ ಮತ್ತು ಎಲ್ಲಾ ಮೂಲ ದಾಖಲೆಗಳನ್ನು ಸಲ್ಲಿಸಿದವರಿಗೆ ಮಾ.11 ರಂದು ಮಧ್ಯಾಹ್ನ 12:30ರಿಂದ ಸಂಜೆ 4 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು. ಅದೇ ದಿನ ಸಂಜೆ 7 ಗಂಟೆಗೆ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಪಡೆದವರು ಮಾ.12ರಂದು ಸಂಜೆ 5:30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.



