ಕ್ರೀಡೆಗಳಿಂದ ದೈಹಿಕ ಸಂಪತ್ತು ವೃದ್ಧಿ

0
oplus_1048576
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಮಗೆ ದೈಹಿಕ ಸಂಪತ್ತು ಬೇಕೆಂದರೆ ಕ್ರೀಡೆಗಳಲ್ಲಿ ತೊಡಗಬೇಕು. ದೈಹಿಕ ಚಟುವಟಿಕೆಗಳೇ ನಮಗೆ ದೈಹಿಕ ಸಂಪತ್ತನ್ನು ನೀಡುತ್ತವೆ. ದೈಹಿಕ ಸಂಪತ್ತಿನಿಂದ ಆರೋಗ್ಯ ದೊರಕುತ್ತದೆ. ಮನುಷ್ಯ ಆರೋಗ್ಯವಂತನಾಗಿದ್ದಾಗ ಮಾತ್ರ ಅವನು ಜೀವನದಲ್ಲಿ ನೆಮ್ಮದಿಯಿಂದ ಬದುಕಬಹುದು ಎಂದು ಡಾ. ಕೆ.ಬಿ. ಧನ್ನೂರ ಹೇಳಿದರು.

Advertisement

ಪಟ್ಟಣದ ಆರ್.ಕೆ. ಕುಲಕರ್ಣಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಒಲಿಂಪಿಕ್ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕ್ರೀಡೆ ಎಂದರೆ ಈಗ ಕ್ರಿಕೆಟ್ ಮಾತ್ರ ಆಗಿದೆ. ಅದೊಂದೇ ಕ್ರೀಡೆ ಅಲ್ಲ ಎಂಬುದನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಿದೆ. ಈ ದಿಶೆಯಲ್ಲಿ ನರೇಗಲ್ಲ ಪಟ್ಟಣದಲ್ಲಿನ ಚೈತನ್ಯ ಕ್ರೀಡಾ ಸಂಸ್ಥೆ ಅನೇಕ ಕ್ರೀಡಾಪಟುಗಳನ್ನು ಹುಟ್ಟು ಹಾಕುತ್ತಿರುವುದು ಶ್ಲಾಘನೀಯ. ಒಂದು ಕಾಲದಲ್ಲಿ ನರೇಗಲ್ಲ ಕ್ರೀಡಾ ಚಟುವಟಿಕೆಗಳ ತವರೂರಾಗಿತ್ತು. ಇಲ್ಲಿನ ವಾಲಿಬಾಲ್ ಆಟ ಪ್ರಸಿದ್ಧಿ ಪಡೆದಿತ್ತು. ಈ ದಸರಾ ಕ್ರೀಡಾಕೂಟವು ಅಂತಹ ಆಟದ ಸೆಲೆಯನ್ನು ನಮ್ಮ ಮಕ್ಕಳಲ್ಲಿ ಮೂಡಿಸಿದರೆ ಈ ಕ್ರೀಡಾಕೂಟ ಇಲ್ಲಿ ನಡೆದದ್ದು ಸಾರ್ಥಕ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಕ್ರೀಡಾಜ್ಯೋತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ಮುಖಂಡ ಶಿವನಗೌಡ ಪಾಟೀಲ, ಕ್ರೀಡಾಧಿಕಾರಿ ವಿ.ವಿ. ಈಟಿ, ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಲ್. ಗುಳೇದಗುಡ್ಡ, ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಸಿ. ಗುಳಗಣ್ಣವರ, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಪ್ಪ ನಿಡಗುಂದಿ ಇನ್ನಿತರರಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬಿ.ಟಿ. ತಾಳಿ ಸ್ವಾಗತಿಸಿದರು. ಶಿಕ್ಷಕ ಡಿ.ಎಸ್. ಬಡಿಗೇರ ನಿರೂಪಿಸಿದರು. ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗರಾಜ ಬೇವಿನಕಟ್ಟಿ ವಂದಿಸಿದರು.

ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್, ಟಿವಿ ಲೋಕದಲ್ಲಿ ಮುಳಗಿ ಆಟ ಮತ್ತು ಕ್ರೀಡಾಂಗಣಗಳನ್ನೇ ಮರೆತಿವೆ. ಇದರಿಂದ ಅವರಲ್ಲಿ ದೈಹಿಕ ಶಕ್ತಿ ಕುಂಠಿತವಾಗಿದೆ. ಸ್ವಲ್ಪವೇ ದೂರ ನಡೆಯಲೂ ಅವರು ವಾಹನಗಳನ್ನು ಅವಲಂಬಿಸುತ್ತಿರುವುದು ಅವರ ಕಾಲುಗಳಲ್ಲಿ ಶಕ್ತಿ ಇಲ್ಲವೆಂಬುದನ್ನು ತೋರಿಸುತ್ತದೆ. ನಿತ್ಯವೂ ಬೆಳಿಗ್ಗೆ ವಾಕಿಂಗ್, ಸಂಜೆ ಆಟೋಟಗಳಲ್ಲಿ ಪಾಲ್ಗೊಂಡರೆ ಅವರ ಕೈಕಾಲುಗಳಲ್ಲಿ ಶಕ್ತಿ ಬರುತ್ತದೆ. ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ನಮ್ಮೂರಲ್ಲಿ ನಡೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ಎಂದರು.


Spread the love

LEAVE A REPLY

Please enter your comment!
Please enter your name here