ವಿಜಯಸಾಕ್ಷಿ ಸುದ್ದಿ, ನರಗುಂದ : ತಾಲೂಕು ಪಂಚಾಯಿತಿ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಸಾರ್ವಜನಿಕರ ಸ್ಥಳಗಳಾದ ಬಸ್ ನಿಲ್ದಾಣ ಹಾಗೂ ಆಟೋ ರಿಕ್ಷಾ ನಿಲ್ದಾಣಗಳಲ್ಲಿನ ಸಾರ್ವಜನಿಕರಿಗೆ ಕಡ್ಡಾಯ ಮತದಾನ ಜಾಗೃತಿ ಮೂಡಿಸಲಾಯಿತು. ಬಸ್ ನಿಲ್ದಾಣದಲ್ಲಿನ ಮತದಾರರನ್ನು ಭೇಟಿಯಾಗಿ, ಕೈಗೆ ರೆಡ್ ರೋಸ್ ನೀಡುವುದರ ಮೂಲಕ ಮೇ.7ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ತಾ.ಪಂ ಅಧಿಕಾರಿಗಳು ಮನವಿ ಮಾಡಿದರು.
ತಾ.ಪಂ ಇ.ಓ ಮತ್ತು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಸೋಮಶೇಖರ್ ಬಿರಾದಾರ ಮಾತನಾಡಿ, ಪಂಚಾಯತ್ ರಾಜ್ ದಿವಸ್ ಅಂಗವಾಗಿ ಇಂದು ಸಾರ್ವಜನಿಕರ ಸ್ಥಳಗಳಲ್ಲಿ ಕಡ್ಡಾಯ ಮತದಾನ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಲೋಕಸಭೆ ಚುನಾವಣೆಯ ಮತದಾನದ ವೇಳೆ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸಬೇಕೆಂದರು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಮೇ-7ರ ಮತದಾನ ದಿನವನ್ನು ನೆನಪಿಟ್ಟುಕೊಳ್ಳಬೇಕು. ಎಲ್ಲೇ ಇದ್ದರೂ ಆ ದಿನ ಊರಿಗೆ ಬಂದು ಮತ ಚಲಾಯಿಸಬೇಕು ಎಂದರು.
ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ್ ಮಾತನಾಡಿ, ಆಟೋ ರಿಕ್ಷಾ ಮೂಲಕ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ಮಾಡುತ್ತಾರೆ. ಆಟೋ ರಿಕ್ಷಾ ಚಲಾಯಿಸುವವರು ತಮ್ಮ ರಿಕ್ಷಾದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಮತದಾನ ಮಾಡಲು ತಿಳಿಹೇಳಬೇಕು. ಈ ಮೂಲಕ ದೇಶದ ಚುನಾವಣೆಯ ಕಡ್ಡಾಯ ಮತದಾನ ಜಾಗೃತಿ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಕೃಷ್ಣಮ್ಮ ಹಾದಿಮನಿ, ತಾಲೂಕಿನ ಗ್ರಾಮ ಪಂಚಾಯತಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಲೂಕಿನ ನರೇಗಾ ಸಿಬ್ಬಂದಿ ವರ್ಗ, ಬಸ್ ನಿಲ್ದಾಣದ ವ್ಯವಸ್ಥಾಪಕರು, ಸಾರಿಗೆ ಇಲಾಖೆ ಸಿಬ್ಬಂದಿ, ತಾಲೂಕು ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನಗರದ ಬಸ್ ನಿಲ್ದಾಣದ ಮೂಲಕ ಬೇರೆ ಬೇರೆ ಗ್ರಾಮಗಳಿಗೆ, ಜಿಲ್ಲೆಗಳಿಗೆ, ರಾಜ್ಯಗಳಿಗೆ ಸಂಚರಿಸುವ ಪ್ರಯಾಣಿಕರ ಕೈಗೆ ರೆಡ್ ರೋಸ್ ನೀಡಿ ಮತದಾನ ಮಾಡುವ ಸಂಕಲ್ಪ ಮಾಡೋಣ ಎಂದು ಅಧಿಕಾರಿ ವರ್ಗ ಮತದಾನ ಅರಿವು ಮೂಡಿಸಿದರು. ಅಲ್ಲದೆ ನಿಲ್ದಾಣದ ಆಟೋ ರಿಕ್ಷಾ ಸವಾರರನ್ನು ಭೇಟಿಯಾಗಿ ಅವರಿಗೆ ರೋಸ್ ನೀಡಿ ಕಡ್ಡಾಯ ಮತದಾನ ಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿ ಮತದಾನ ಮಾಡಿ ಮತ್ತು ಪ್ರಯಾಣಿಕರಿಗೆ ಮತದಾನ ಮಾಡುವಂತೆ ತಿಳಿಹೇಳಿ ಎಂದು ಮಾಹಿತಿ ನೀಡಲಾಯಿತು.