ತಿರುವನಂತಪುರಂ: ಚುನಾವಣೆ ಹೊಸ್ತಿಲಲ್ಲಿರುವ ಕೇರಳದಲ್ಲಿ ಕೇರಳ ಸ್ಟೋರಿ 2 ಸಿನಿಮಾ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸೆನ್ಸಾರ್ ಮಂಡಳಿ ಯುಎ ಸರ್ಟಿಫಿಕೇಟ್ ನೀಡಿದ್ದು, ಚಿತ್ರ ಫೆ.27ರಂದು ಬಿಡುಗಡೆಯಾಗಲಿದೆ. ಆದರೆ ಸಿನಿಮಾ ಬಿಡುಗಡೆಯ ಮುನ್ನವೇ ರಾಜ್ಯ ರಾಜಕೀಯದಲ್ಲಿ ಕಾವು ಹೆಚ್ಚಾಗಿದೆ.
ಚಿತ್ರದಲ್ಲಿ ಕೇರಳದ ಜಾತ್ಯತೀತ ಮೌಲ್ಯಗಳಿಗೆ ಧಕ್ಕೆ ತರುವ ಮತ್ತು ಧಾರ್ಮಿಕ ಸೌಹಾರ್ದತೆಗೆ ವಿರೋಧಿಯಾದ ಅಂಶಗಳಿವೆ ಎಂದು ಆರೋಪಿಸಿರುವ ಸಿಎಂ ಪಿಣರಾಯಿ ವಿಜಯನ್, ಜನತೆ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಈ ಹೇಳಿಕೆ ಮತ್ತಷ್ಟು ಸಂಚಲನ ಮೂಡಿಸಿದೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಜನತೆಗೆ ಕರೆ ನೀಡುವ ಬದಲು ನ್ಯಾಯಾಲಯದ ಮೆಟ್ಟಿಲೇರುವುದು ಸೂಕ್ತ ಎಂದು ಪ್ರತಿಕ್ರಿಯಿಸಿದೆ. ಸರ್ಕಾರ ಸಿನಿಮಾ ತಡೆಯಲು ಬಯಸಿದರೆ ಕಾನೂನು ಮಾರ್ಗ ಅನುಸರಿಸಬೇಕು ಎಂದು ಒತ್ತಾಯಿಸಿದೆ.
ಇದೀಗ ಪ್ರಕರಣ ನ್ಯಾಯಾಲಯದ ಅಂಗಳಕ್ಕೇರಿದೆ. ಕಣ್ಣೂರು ಮೂಲದ ಶ್ರೀದೇವ್ ನಂಬೂದಿರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಚಿತ್ರದ ಟ್ರೇಲರ್‌ನಲ್ಲಿ ಕೇರಳವನ್ನು ಕೆಟ್ಟದಾಗಿ ಬಿಂಬಿಸಿರುವ ಅಂಶಗಳಿವೆ ಎಂದು ಆರೋಪಿಸಿದ್ದಾರೆ. ಕೋಮು-ಪ್ರಾದೇಶಿಕ ಸಂಘರ್ಷಕ್ಕೆ ಎಡೆಮಾಡಿಕೊಡುವ ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಅಂಶಗಳಿರುವುದರಿಂದ ಫಿಲ್ಮ್ ಸರ್ಟಿಫಿಕೇಟ್ ರದ್ದುಪಡಿಸಿ, ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಬಿಎಫ್‌ಸಿಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಫೆ.24ರಂದು ವಿಚಾರಣೆ ನಡೆಯಲಿದೆ. ವಿಚಾರಣೆ ಫಲಿತಾಂಶವೇ ಚಿತ್ರ ಬಿಡುಗಡೆ ಭವಿಷ್ಯವನ್ನು ನಿರ್ಧರಿಸಲಿದೆ.



