ವಿಜಯಸಾಕ್ಷಿ ಸುದ್ದಿ, ಗದಗ: ಮುಲಾಯಂ ಸಿಂಗ್ ಯಾದವ್ ನಂತರ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಪಕ್ಷ ದೇಶದಾದ್ಯಂತ ಬಲಿಷ್ಠಗೊಳ್ಳುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 3ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ಸಮಾಜವಾದಿ ಪಕ್ಷವನ್ನು ದೇಶದಾದ್ಯಂತ ಕಟ್ಟಲು ಯೋಜನೆ ರೂಪಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಂಜಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕದಲ್ಲಿ ಮುಂದೆ ಬರುವ ಎಲ್ಲ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ. ಗೋವಿಂದರಾಜ ಕೊಣ್ಣೂರು ಅವರನ್ನು ಚುನಾವಣಾ ಸಮಿತಿಯ ಸಂಚಾಲಕರನ್ನಾಗಿ ನೇಮಿಸಿ, ಈ ಭಾಗದ ಆರು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಸೂಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದರು.
ಕರ್ನಾಟಕದ ಮಟ್ಟಿಗೆ ಶಿವಮೊಗ್ಗ ಜಿಲ್ಲೆ ಸಮಾಜವಾದಿ ನಾಯಕರ ಉಗಮಸ್ಥಳ. ನಮ್ಮ ಪಕ್ಷದಿಂದ ಹಲವಾರು ನಾಯಕರು ಬೆಳೆದು, ಆನಂತರದಲ್ಲಿ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡರು. ಜೆ.ಎಚ್. ಪಟೇಲ್, ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ ಇವರೆಲ್ಲರೂ ಸಮಾಜವಾದ ಸಿದ್ಧಾಂತದಿಂದಲೇ ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬಂದವರು ಎಂದರು.
2024ರ ಲೋಕಸಭಾ ಚುನಾವಣೆ ಫಲಿತಾಂಶ ಸಮಾಜವಾದಿ ಪಕ್ಷಕ್ಕೆ ಹೆಚ್ಚಿನ ಬಲ ತಂದಿದ್ದು, ರಾಜ್ಯದಲ್ಲೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ. 12ನೇ ಶತಮಾದ ಬಸವಣ್ಣನ ಕಾಲದಲ್ಲೇ ಸಮಾಜವಾದ ಪರಿಕಲ್ಪನೆ ಹುಟ್ಟಿತ್ತು. ಅದರ ಆಶಯದ ಮೇಲೆಯೇ ನಮ್ಮ ಪಕ್ಷ ರಾಜಕೀಯ ಹೋರಾಟ ನಡೆಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸುಭಾಷ್ ಮುಂಡಗೋಡ, ತಿಪ್ಪೇಸ್ವಾಮಿ, ಶಂಕರ್ ಯಾದವ್, ಪ್ರಕಾಶ ಪೂಜಾರ್, ಆರ್.ವೇಣುಗೋಪಾಲ್, ಗೋವಿಂದರಾಜ ಪನ್ನೂರ ಇದ್ದರು.
ಪಿಚ್ರೆ (ಹಿಂದುಳಿದ) ದಲಿತ, ಅಲ್ಪಸಂಖ್ಯಾತ–ಪಿಡಿಎ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ದೇಶದಲ್ಲಿನ ಎಲ್ಲ ಅಹಿಂದ ವರ್ಗಕ್ಕೂ ಸಮಾನ ಅವಕಾಶಗಳು ಸಿಗಬೇಕು ಎಂಬುದು ನಮ್ಮ ಪಕ್ಷದ ಧ್ಯೇಯವಾಗಿದೆ. ಕೇಂದ್ರ ಸರಕಾರ ಜಾತಿ ಜನಗಣತಿಯನ್ನು ನಿಖರವಾಗಿ ನಡೆಸುವ ಮೂಲಕ ಎಲ್ಲರಿಗೂ ಎಲ್ಲ ಕ್ಷೇತ್ರದಲ್ಲೂ ಸಮಾನ ಅವಕಾಶ ಒದಗಿಸಬೇಕು ಎಂದು ಮಂಜಪ್ಪ ಹೇಳಿದರು.