ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ಆಕ್ಸಲರೇಟರ್ ನೆಟ್‌ವರ್ಕ್ನಡಿಯಲ್ಲಿ ಇಂಡಕ್ಷನ್ ಮತ್ತು ಸ್ಟಾರ್ಟ್ಅಪ್ ಬೂಟ್‌ಕ್ಯಾಂಪ್ ಕಾರ್ಯಕ್ರಮವು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆಯಿತು.
ಧಾರವಾಡ ಕೃ.ವಿ.ವಿ. ಕೃ.ವಿ.ವಿ.ಯ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಡಿ. ಬಿರಾದಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ವ್ಯಾಪಾರ ತಂತ್ರದ ಪುನರ್ವಿಮರ್ಶೆಗಳು, ಉತ್ಪನ್ನ-ಮಾರುಕಟ್ಟೆ ಹೊಂದಾಣಿಕೆಗಾಗಿ ಮಾರುಕಟ್ಟೆ ಮೌಲ್ಯೀಕರಣ, ಗ್ರಾಹಕರನ್ನು ಸೆಳೆಯುವ ತಂತ್ರಗಳು ಮತ್ತು ಹೂಡಿಕೆ ಸಿದ್ಧತೆ ತಂತ್ರಗಳು ಇತ್ಯಾದಿಗಳ ಕುರಿತು ಈ ಶಿಬಿರದಲ್ಲಿ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಆಕ್ಸಿಲರೇಷನ್ ನೆಟ್‌ವರ್ಕ್ ಕರ್ನಾಟಕ ಸರ್ಕಾರದ ಸ್ಟಾರ್ಟ್ಅಪ್‌ಗಳನ್ನು ಸಬಲೀಕರಣಗೊಳಿಸುವುದು ಮತ್ತು ರಾಜ್ಯದ ಅಭಿವೃದ್ಧಿಗೆ ಸ್ಟಾರ್ಟ್ಅಪ್‌ಗಳಿಗೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಸೇರಿದಂತೆ ಕರ್ನಾಟಕದಾದ್ಯಂತ ಆಕ್ಸಲರೇಟರ್‌ಗಳು, ಇನ್‌ಕ್ಯುಬೇಟರ್‌ಗಳು ಮತ್ತು ಉದ್ಯಮ ಮುಂದಾಳುಗಳ ಜಾಲದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಸ್ಟಾರ್ಟ್ಅಪ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಆರು ತಿಂಗಳ ಅವಧಿಯ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
ಈ ಯೋಜನೆಯಲ್ಲಿ ಸ್ಟಾರ್ಟ್ಅಪ್‌ಗಳಿಗೆ ತಜ್ಞರ ಮಾರ್ಗದರ್ಶನ, ಮೂಲಸೌಕರ್ಯ, ಮಾರುಕಟ್ಟೆ ಸಂಪರ್ಕಗಳು ಮತ್ತು ಸಾಹಸೋದ್ಯಮ ಬಂಡವಾಳಶಾಹಿಗಳಿಂದ ಪ್ರೋತ್ಸಾಹ ಒದಗಿಸುವುದು, ಜ್ಞಾನ ವಿನಿಮಯ, ಅಂತಾರಾಷ್ಟ್ರೀಯ ವಿಸ್ತರಣೆ, ಸಂಶೋಧನೆ ಮತ್ತು ಅಭಿವೃದ್ಧಿಯ ವಾಣಿಜ್ಯೀಕರಣ ಮತ್ತು ಬೌದ್ಧಿಕ ಆಸ್ತಿ ವಿಷಯದ ಮೇಲೆ ಕೇಂದ್ರೀಕರಿಸುವ ಮೂಲಕ, ಈ ಕಾರ್ಯಕ್ರಮವು ಮುಂದಿನ ಮೂರು ವರ್ಷಗಳಲ್ಲಿ 360 ಸ್ಟಾರ್ಟ್ಅಪ್‌ಗಳ ಮೇಲೆ ಪ್ರಭಾವ ಬೀರಲಿದೆ. ಇದು ರಾಜ್ಯಾದ್ಯಂತ ನಾವೀನ್ಯತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಅಭಿವೃದ್ಧಿ ಮತ್ತು ಉದ್ಯೋಗ ಮಿಷನ್‌ನ ಯೋಜನಾ ವ್ಯವಸ್ಥಾಪಕರಾದ ಕಿರಣ್ ಕುಲಕರ್ಣಿ, ಡಾ. ಎಸ್.ಎಸ್. ಡೊಳ್ಳಿ, ಜಿನ್‌ಸರ್ವ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ಹಿರೇಮಠ, ಡಾ. ಜಿ.ಬಸವರಾಜ, ಅಸ್ತಾ ಮತ್ತು ಜಿನ್‌ಸರ್ವ್ನ ಪ್ರತಿನಿಧಿಗಳು ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ), ಸ್ಟಾರ್ಟ್ಅಪ್ ಕರ್ನಾಟಕ ಮತ್ತು ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಎಸ್‌ಆ್ಯಂಡ್ ಟಿ ವಿಭಾಗದ ಕೆ-ಟೆಕ್, ಕಿಟ್ಸ್ನ ಪ್ರಮುಖ ಉಪಕ್ರಮವಾಗಿದ್ದು, ಕರ್ನಾಟಕ ಆಕ್ಸಲರೇಟರ್ ನೆಟ್‌ವರ್ಕ್(ಕೆಎಎನ್), ಬೆಂಗಳೂರಿನ ಜಿನ್‌ಸರ್ವ್ ಮಾರ್ಗದರ್ಶಕ ಪಾಲುದಾರರಾಗಿ ಮತ್ತು ಕೃವಿವಿ, ಧಾರವಾಡ ಮಾರ್ಗದರ್ಶಕ ಪಾಲುದಾರರಾಗಿ ಅಲ್ಲದೇ 20 ನವೋದ್ಯಮಗಳು ಇದರಲ್ಲಿ ಪಾಲ್ಗೊಂಡಿದ್ದವು.