ಕೊಲಂಬಿಯಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ ವಾಯುಪಡೆಯ ವಿಮಾನ ಪತನಗೊಂಡು ಕನಿಷ್ಠ ಮೂವತ್ತನಾಲ್ಕು ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.
ಸೋಮವಾರ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ತೀವ್ರವಾಗಿದೆ. ಕೊಲಂಬಿಯಾದ ವಾಯುಪಡೆಯ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಅಪಘಾತ ಇದಾಗಿದೆ. ಈ ದುರಂತವು ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ಸಾರಿಗೆ ವಿಮಾನವು ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಹಾರುತ್ತಿದ್ದಾಗ ಸಂಭವಿಸಿದೆ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ವಿಮಾನವು ಮದ್ದುಗುಂಡುಗಳನ್ನು ಹೊತ್ತೊಯ್ಯುತ್ತಿತ್ತು, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನೆಲಕ್ಕೆ ಅಪ್ಪಳಿಸಿ ನಂತರ ಅದು ಸ್ಫೋಟಗೊಂಡಿತು ಮತ್ತು ಪರಿಣಾಮವಾಗಿ, ವಿಮಾನವು ಬೆಂಕಿಗೆ ಆಹುತಿಯಾಯಿತು ಎಂದು ವರದಿ ತಿಳಿಸಿದೆ.



